ರೈತರ ಪ್ರತಿಭಟನೆಗೆ ರಾಹುಲ್ ಗಾಂಧಿ, ಕೇಜ್ರಿವಾಲ್ ಬೆಂಬಲ

ನವದೆಹಲಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜಧಾನಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಬೃಹತ್ ಪ್ರತಿಭಟನೆಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಆಮ್ ಆದ್ಮಿ ಪಕ್ಷದ ಮುಖ್ಯಸ್ಥ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬೆಂಬಲ ನೀಡಿದ್ದು, ರೈತರೊಂದಿಗೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

ಸಾಲ ಮನ್ನಾ, ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ, ಸ್ವಾಮಿನಾಥ ವರದಿ ಜಾರಿ ಸೇರಿದಂತೆಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎರಡು ದಿನಗಳಿಂದ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಬೃಹತ್ ಪ್ರತಿಭಟನೆ ಈಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರಕ್ಕೆ ಅಗ್ನಿ ಪರೀಕ್ಷೆಯಾಗಿದೆ.

ರೈತರ ಈ ಬೃಹತ್ ರ್ಯಾಲಿಗೆ 21ಕ್ಕೂ ಹೆಚ್ಚು ರಾಜಕೀಯ ಪಕ್ಷಗಳು ಹಾಗೂ 200ಕ್ಕೂ ಹೆಚ್ಚು ರೈತ ಮತ್ತು ಕಾರ್ಮಿಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಲಕ್ಷಾಂತರ ರೈತರು ಬಿಗಿಪಟ್ಟು ಹಿಡಿದಿರುವುದರಿಂದ ಇದು ಮೋದಿ ಸರ್ಕಾರಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ರೈತರ ಅಖಂಡ ಶಕ್ತಿ ಪ್ರದರ್ಶನದಿಂದ ಕೇಂದ್ರ ಸರ್ಕಾರ ಒತ್ತಡಕ್ಕೆ ಸಿಲುಕಿದೆ.

ಈ ನಡುವೆ ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಿರುವ ರಾಹುಲ್ ಗಾಂಧಿ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಪ್ರಧಾನಿ ಮೋದಿಯವರು ರೈತರಿಗೆ ಟೊಳ್ಳು ಭರವಸೆಗಳನ್ನಷ್ಟೇ ನೀಡಿದ್ದಾರೆ, ರೈತರ ಕ್ಷೇಮಾಭಿವೃದ್ಧಿಗಾಗಿ ಏನನ್ನೂ ಮಾಡಿಲ್ಲ ಎಂದು ಕಿಡಿಕಾರಿದ್ದಾರೆ.

ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚುವುದಾಗಿ, ಬೋನಸ್ ನೀಡುವುದಾಗಿ ಮೋದಿಯವರು ಈ ಹಿಂದೆ ಹೇಳಿದ್ದರು. ಆದರೆ, ಅದಾವೂದೂ ಅಗಿಲ್ಲ. ದೊಡ್ಡ ದೊಡ್ಡ ಉದ್ಯಮಿಗಳ ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಿದೆ. ಆದರೆ, ದೇಶದ ಬೆನ್ನೆಲುಬಾಗಿರುವ ರೈತರಿಗಾಗಿ ಏನ್ನೂ ಮಾಡಿಲ್ಲ ಎಂದು ಗುಡುಗಿದ್ದಾರೆ.

ಇದರಂತೆ ಸಿಪಿಐ(ಎಂ) ನಾಯಕ ಸೀತಾರಾಮ್ ಯೆಚೂರಿಯವರು ಮಾತನಾಡಿದ್ದು, ಬಿಜೆಪಿ, ಪ್ರಧಾನಿ ಮೋದಿ ಹಾಗೂ ಆರ್’ಎಸ್ಎಸ್ ಬಳಿ ರಾಮ ಮಂದಿರ ಎಂಬ ಏಕೈಕ ಶಸ್ತ್ರಾಸ್ತ್ರವಿದೆಯಷ್ಟೇ. ಚುನಾವಣೆ ಬಂದ ಕೂಡಲೇ ರಾಮ ರಾಮ ಎಂದು ಜಪ ಮಾಡುತ್ತಾರೆಂದು ತಿಳಿಸಿದ್ದಾರೆ.

ರೈತರ ಪ್ರತಿಭಟನೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರೂ ಕೂಡ ಸಾಥ್ ನೀಡಿದ್ದು, ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಸ್ವಾಮಿನಾಥನ್ ವರದಿ ಜಾರಿಗೆ ತರುವಂತೆ ಆಗ್ರಹಿಸಿ 5 ತಿಂಗಳು ಕಳೆದಿವೆ. ಆದರೂ, ಕೇಂದ್ರ ಸರ್ಕಾರ ಏನನ್ನೂ ಮಾಡಿಲ್ಲ. ನ್ಯಾಯೋಚಿತ ಬೆಲೆಗಳಿಂದ ರೈತರಿಗೆ ಮೋಸ ಮಾಡಲಾಗುತ್ತಿದೆ. ರೈತರು ಭಿಕ್ಷುಕರಲ್ಲ ಎಂದು ಹೇಳಿದ್ದಾರೆ.

ಇನ್ನು ರೈತರ ಪ್ರತಿಭಟನೆಗೆಎನ್’ಸಿಪಿ ಮುಖ್ಯಸ್ಥ ಶರದ್ ಪವಾರ್, ಫಾರೂಖ್ ಅಬ್ದುಲ್ಲಾ, ದಿನೇಶ್ ತ್ರಿವೇದಿ, ಶರದ್ ಯಾದವ್, ಸಾಮಾಜಿಕ ಕಾರ್ಯಕರ್ತರು, ಮೇಧಾ ಪಾಟ್ಕರ್, ಪತ್ರಕರ್ತ ಸಾಯಿನಾಥ್ ಸೇರಿದಂತೆ ಹಲವರು ಬೆಂಬಲ ಸೂಚಿಸಿದ್ದಾರೆ.

farmers protest,Rahul Gandhi, Arvind Kejriwal,support

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ