ಡಾ.ರಾಜ್ ಕುಮಾರ್ ನಿಧನರಾದಾಗ ಸೂಕ್ತ ಬಂದೋಬಸ್ತ್ ಕೈಗೊಳ್ಲಲು ಸಾಧ್ಯವಾಗಲಿಲ್ಲ ಸಿ.ಎಂ.

ಬೆಂಗಳೂರು, ನ.30- ಡಾ.ರಾಜ್‍ಕುಮಾರ್ ನಿಧನರಾದಾಗ ಸೂಕ್ತ ಬಂದೋಬಸ್ತ್ ಕೈಗೊಳ್ಳಲು ಸರ್ಕಾರಕ್ಕೆ ಸಾಧ್ಯವಾಗದಂತಹ ವಾತಾವರಣ ನಿರ್ಮಾಣವಾಗಿತ್ತು.ಅದರ ಬೆನ್ನಲ್ಲೇ ಕೆಲವು ಗೊಂದಲಗಳು ಉಂಟಾಗಿ ನನ್ನ ಜೀವನದಲ್ಲಿ ನೋವುಂಟು ಮಾಡಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ವಿಷಾದ ವ್ಯಕ್ತಪಡಿಸಿದ್ದಾರೆ.

ನಗರದ ಅಂಬೇಡ್ಕರ್ ಭವನದಲ್ಲಿಂದು ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಚಲನಚಿತ್ರರಂಗ ಆಯೋಜಿಸಿದ್ದ ಅಂಬಿಗೆ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಬರೀಶ್ ಅವರು ನಿಧನರಾದ ಸುದ್ದಿ ತಿಳಿಯುತ್ತಿದ್ದಂತೆ ತಕ್ಷಣ ನಾನು ಭದ್ರತೆಯನ್ನೂ ಕಾಯದೆ ಖಾಸಗಿ ಕಾರಿನಲ್ಲಿ ಆಸ್ಪತ್ರೆಗೆ ತೆರಳಿದೆ.ಅಲ್ಲಿ ಅಂಬಿ ಅವರ ಪುತ್ರ ಅಭಿಷೇಕ್ ನಿಂತಿದ್ದ.ಆತನ ಕಣ್ಣಿನಲ್ಲಿದ್ದ ಧೈರ್ಯ ನೋಡಿ ನನಗೆ ಆಶ್ಚರ್ಯವಾಯಿತು.ಒಂದು ಹನಿ ಕಣ್ಣೀರು ಇಲ್ಲದೆ ಇಷ್ಟು ಧೈರ್ಯವಾಗಿರಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದೆ.

ಒಂದು ವೇಳೆ ಕಣ್ಣೀರು ಹಾಕಿದರೆ ಅಥವಾ ಅಧೀರನಾದರೆ ತಾಯಿ ಇನ್ನಷ್ಟು ಕುಗ್ಗಿ ಆಘಾತಕ್ಕೊಳಗಾಗಬಹುದು ಎಂದು ಅವಡುಗಚ್ಚಿನಿಂತಿದ್ದೇನೆ ಎಂದು ಅಭಿ ಹೇಳಿದ, ಅದು ಅವರ ತಂದೆಯಿಂದ ಬಂದ ಗುಣ. ಅಂಬರೀಶ್ ನಿಧನದ ನಂತರ ನಾವು ಅವರ ಕುಟುಂಬದ ಜತೆ ಚರ್ಚೆ ಮಾಡಿ ಸ್ಥಳಕ್ಕೆ ಹಿರಿಯ ಅಧಿಕಾರಿಗಳನ್ನು ಕರೆಸಿಕೊಂಡು ಮುಂದಿನ ಕೆಲಸಗಳ ಬಗ್ಗೆ ಸಮಾಲೋಚನೆ ನಡೆಸಿದೆವು.ನಮ್ಮ ಸೂಚನೆಯಂತೆ ಅಧಿಕಾರಿಗಳು ಕ್ರಮ ಕೈಗೊಂಡರು ಹಾಗಾಗಿ ಎಲ್ಲವೂ ಶಾಂತಿಯುತವಾಗಿ ನಡೆಯಿತು ಎಂದರು.

ಈ ಹಿಂದೆ ನಾನು ಸಿಎಂ ಆಗಿದ್ದಾಗ ಡಾ.ರಾಜ್‍ಕುಮಾರ್ ಅಗಲಿದರು.ಆ ಸುದ್ದಿಯನ್ನು ಆಸ್ಪತ್ರೆಯವರು ಸರ್ಕಾರಕ್ಕೆ ಮಾಹಿತಿ ನೀಡುವ ಬದಲು ನೇರವಾಗಿ ಸಾರ್ವಜನಿಕರಿಗೆ ತಿಳಿಸಿದರು.ಸುದ್ದಿ ಕಾಡ್ಗಿಚ್ಚಿನಂತೆ ಹರಡಿ ಜನ ಸಾಗರೋಪಾದಿಯಲ್ಲಿ ಸೇರಲು ಆರಂಭಿಸಿದರು.ರಾಜ್‍ಕುಮಾರ್ ಆಸೆಯಂತೆ ನೇತ್ರಧಾನಕ್ಕೆ ಕಣ್ಣುಗಳನ್ನು ತೆಗೆಯಲು ಪಾರ್ಥಿವ ಶರೀರವನ್ನು ಸರ್ಕಾರದ ಗಮನಕ್ಕೆ ತರದೆ ಸದಾಶಿವನಗರದ ಮನೆಗೆ ತೆಗೆದುಕೊಂಡು ಹೋದರು.ಅಲ್ಲಿ ಲಕ್ಷಾಂತರ ಜನ ಸೇರಿದ್ದರಿಂದ ಏನು ಮಾಡಲಾಗದಂತಹ ಸ್ಥಿತಿ ಇತ್ತು.ಅಭಿಮಾನಿಗಳು ಅಕ್ಷರಶಃ ದಾಳಿ ಮಾಡಿದರು.ಆಗ ಗೊಂದಲಗಳು ನಿರ್ಮಾಣವಾದವು.ಸರಿಯಾಗಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಸಿಗದಂತಾಯಿತು ಎಂದು ಹೇಳಿದರು.

ನಾನು ಮುಖ್ಯಮಂತ್ರಿಯಾದ ಅವಧಿಯಲ್ಲೇ ರಾಜ್‍ಕುಮಾರ್ ಮತ್ತು ಅಂಬರೀಶ್ ಅವರಂಥ ಮೇರು ನಟರು ಇಲ್ಲವಾಗಿದ್ದು, ನನ್ನ ಅದೃಷ್ಟವೋ ದುರಾದೃಷ್ಟವೋ ಗೊತ್ತಿಲ್ಲ. ಅವರ ಅಂತ್ಯಕ್ರಿಯೆಯನ್ನು ನಮ್ಮ ಅವಧಿಯಲ್ಲೇ ನಡೆಸಬೇಕಾದ ಸ್ಥಿತಿಯ ಬಗ್ಗೆ ಸದಾಕಾಲ ಚಿಂತೆ ಮಾಡುತ್ತಿರುತ್ತೇನೆ. ಆಕಸ್ಮಿಕವಾಗಿ ಮೊದಲು ಮುಖ್ಯಮಂತ್ರಿಯಾದೆ, ಎರಡನೇ ಬಾರಿಗೆ ಮೈತ್ರಿ ಸರ್ಕಾರದ ನೇತೃತ್ವ ವಹಿಸಿದ್ದೇನೆ. ಬಡವರ ಬಗ್ಗೆ ತಾಯಿ ಹೃದಯ ಹೇಗೆ ಇರಬೇಕು ಎಂಬ ಬಗ್ಗೆ ನನಗೆ ತಂದೆ-ತಾಯಿಗಳಿಂದ ಕಲಿತಿದ್ದೇನೆ. ನಂತರ ಡಾ.ರಾಜ್ ಚಿತ್ರಗಳೇ ನನಗೆ ಪ್ರೇರಣೆ, ಸ್ನೇಹಪರತೆಯನ್ನು ನಾನು ಅಂಬರೀಶ್ ಅವರಿಂದ ಕಲಿತೆ. ಅವರ ಹೃದಯ ವೈಶಾಲ್ಯತೆ ರಾಜ್ಯದಲ್ಲಷ್ಟೇ ಅಲ್ಲ ದೇಶದಲ್ಲೆ ಮನೆ ಮಾತಾಗಿತ್ತು.ಅಂಬರೀಶ್ ಅವರು ತಮ್ಮ ವೈಯಕ್ತಿಕ ಸ್ಥಾನಮಾನಗಳಿಗಾಗಿ ಎಂದಿಗೂ ರಾಜಿ ಮಾಡಿಕೊಂಡಿಲ್ಲ. ಹುಡಗಾಟಿಕೆಯನ್ನು ಬಿಟ್ಟು ಗಂಭೀರವಾಗಿರುವಂತೆ ಹಲವಾರು ಬಾರಿ ಸಲಹೆ ನೀಡಿದರೂ ಅವರು ಅದನ್ನು ಪಾಲಿಸಲೇ ಇಲ್ಲ.

ಅವರು ಅಂದುಕೊಂಡಂತೆ ಬದುಕಿದರು.ಅಂಬಿಯಲ್ಲಿ ಒರಟುತನ ಇತ್ತು.ಅದು ಮಂಡ್ಯದ ಮಣ್ಣಿನ ಗುಣ, ಅಷ್ಟೇ ಹೃದಯ ವೈಶಾಲ್ಯತೆಯೂ ಅವರಲ್ಲಿತ್ತು.ಅಂತ್ಯ ಸಂಸ್ಕಾರದ ವೇಳೆ ಸಹಕಾರ ನೀಡುವಂತೆ ನಾನು ಮಂಡ್ಯದ ಜನರಿಗೆ ಮನವಿ ಮಾಡಿದೆ.ಮೂರ್ನಾಲ್ಕು ಲಕ್ಷ ಜನ ಸೇರಿದ್ದರು.ಒಂದು ಸಣ್ಣ ಅವಘಡವೂ ನಡೆಯಲಿಲ್ಲ. ಬೆಂಗಳೂರಿನಲ್ಲೂ ಲಕ್ಷಾಂತರ ಜನ ಸೇರಿದ್ದರೂ ಅತ್ಯಂತ ಶಾಂತಿಯುತವಾಗಿ ಅಂತ್ಯಕ್ರಿಯೆ ನಡೆಯಿತು.

ಅಂಬರೀಶ್ ಅವರಲ್ಲಿ ಯಂಥವರನ್ನಾದರೂ ಸೆಳೆಯುವ ಆಯಸ್ಕಾಂತವಿತ್ತು.ಯಾರನ್ನೂ ದಾರಿ ತಪ್ಪಿಸಿದವರಲ್ಲ. ಚಿತ್ರ ನಿರ್ಮಾಣಕ್ಕಾಗಿ ಯಾರಾದರೂ ಅವರ ಬಳಿ ಹೋದರೆ ಇರುವ ದುಡ್ಡನ್ನು ಬೇರೆಯದಕ್ಕೆ ಬಳಸಿ ಉದ್ದಾರ ಆಗು, ಚಿತ್ರರಂಗಕ್ಕೆ ಬಂದು ಕಳೆದುಕೊಳ್ಳಬೇಡ ಎಂದು ಸಲಹೆ ನೀಡುತ್ತಿದ್ದರು.ಒರಟು ಮಾತನಾಡಿ, ಸಂಸ್ಕøತ ಪದಗಳನ್ನು ಬಳಸಿ ಜನರ ಪ್ರೀತಿ ಗಳಿಸಿದ್ದು ಅಂಬಿಯವರು ಮಾತ್ರ. ಇನ್ಯಾರಾದರೂ ಆ ರೀತಿ ಮಾತನಾಡಿದ್ದರೆ ರಾಜಕೀಯದಲ್ಲಿ ತಕ್ಷಣವೇ ಮನೆಗೆ ಕಳುಹಿಸುತ್ತಿದ್ದರು.ನಿಧನಕ್ಕೂ ವಾರದ ಮುಂಚೆ ನನಗೆ ಕರೆ ಮಾಡಿದ್ದ ಅಂಬರೀಶ್, ಆರೋಗ್ಯ ಚೆನ್ನಾಗಿ ನೋಡಿಕೋ ಎಂದು ಸಲಹೆ ಮಾಡಿದ್ದರು. ನಿನ್ನಿಂದ ಒಳ್ಳೆಯ ಕೆಲಸಗಳು ಆಗಬೇಕು ಎಂದಿದ್ದರು.ನಿಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ ಎಂದು ನಾನು ಹೇಳಿದ್ದೆ ಎಂದರು.

ಅಂಬರೀಶ್ ಮತ್ತು ನನ್ನ ಪುತ್ರ ನಿಖಿಲ್ ಅವರನ್ನು ಸೇರಿಸಿ ಒಂದು ಚಿತ್ರ ಮಾಡಬೇಕು ಎಂಬುದು ನನ್ನ ಆಸೆಯಾಗಿತ್ತು.ತೆಲಗಿನಲ್ಲಿ ಪ್ರಭಾಸ್ ಮತ್ತು ಕೃಷ್ಣಂರಾಜು ಸೇರಿ ನಟಿಸಿರುವ ರೆಬಲ್ ಚಿತ್ರ ಅಂಬಿ ಅವರಿಗೆ ಸರಿಯಾಗಿ ಹೊಂದುತ್ತಿತ್ತು. ಹಾಗಾಗಿ ನಾನು ಆ ಚಿತ್ರದ ಹಕ್ಕುಗಳನ್ನು ಖರೀದಿಸಿಕೊಂಡಿದ್ದೆ. ಆದರೆ, ವಿವಿಧ ಕಾರಣಗಳಿಂದ ಚಿತ್ರ ನಿರ್ಮಾಣ ಮಾಡಲಿಲ್ಲ. ಅದೊಂದು ಆಸೆ ಬಾಕಿ ಉಳಿಯಿತು ಎಂದು ತಿಳಿಸಿದರು.

ನನಗೆ ವಿಷ್ಣುವರ್ಧನ್ ಬಗ್ಗೆಯೂ ಅಪಾರ ಗೌರವವಿದೆ. ದೇವೇಗೌಡರು ಪ್ರಧಾನಿಯಾಗಿದ್ದಾಗ ನಾನು, ಅಂಬರೀಶ್ , ವಿಷ್ಣುವರ್ಧನ್ ಒಂದೇ ವಿಮಾನದಲ್ಲಿ ದೆಹಲಿಗೆ ಹೋಗಿ ಪ್ರಧಾನಿ ಅವರ ಮನೆಯಲ್ಲಿ ಊಟ ಮಾಡಿದ್ದೆವು. ವಿಷ್ಣು ಸ್ಮಾರಕದ ಬಗ್ಗೆ ಇರುವ ಗೊಂದಲಗಳನ್ನು ಶೀಘ್ರವೇ ಬಗೆಹರಿಸುವುದಾಗಿ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೇಗೌಡ, ಡಾ.ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ಸುಮಲತಾ ಅಂಬರೀಶ್, ಅಭಿಷೇಕ್ ಗೌಡ, ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ ಸೇರಿದಂತೆ ರಾಜಕೀಯ ಹಾಗೂ ಚಿತ್ರರಂಗದ ಅನೇಕ ಗಣ್ಯರು ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ