ಭೋಪಾಲ್: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸ್ಪಷ್ಟಪಡಿಸಿದ್ದಾರೆ.
ಮಧ್ಯಪ್ರದೇಶದ ಇಂಧೋರ್ ನಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಯಾರನ್ನು ಕಣಕ್ಕಿಳಿಸಬೇಕು ಎಂಬುದನ್ನು ಪಕ್ಷದ ನಿರ್ಧಾರ ಮಾಡುತ್ತದೆ. ಆದರೆ. 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದು ನಾನು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ.
ಮುಂದಿನ ಚುನಾವಣೆಯಲ್ಲಿ ತಾವು ಸ್ಪರ್ಧಿಸಬಾರದೆಂದು ತಮ್ಮ ಮನಸ್ಸಿನ ಭಾವನೆಯಾಗಿದೆ ಎಂದು ಅವರು ತಿಳಿಸಿದ್ದಾರೆ. ಅನಾರೋಗ್ಯದ ಕಾರಣದಿಂದಾಗಿ ಸುಷ್ಮಾ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿರಬಹುದು ಎನ್ನಲಾಗಿದೆ.
ಸಂಸದೆಯಾಗಿ 7 ಬಾರಿ ಮತ್ತು ವಿಧಾನಸಭಾ ಸದಸ್ಯೆಯಾಗಿ ಮೂರು ಬಾರಿ ಆಯ್ಕೆಯಾಗಿರುವ ಸುಷ್ಮಾ ಸ್ವರಾಜ್, 25ನೇ ವಯಸ್ಸಿನಲ್ಲಿಯೇ ಹರಿಯಾಣ ರಾಜ್ಯದ ಅತ್ಯಂತ ಕಿರಿಯ ಸಂಪುಟ ಸಚಿವೆಯಾಗಿದ್ದರು. 1998ರಲ್ಲಿ ಅಲ್ಪಾವಧಿಗೆ ದೆಹಲಿಯ 5ನೇ ಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವರಾಗಿ ಸೇವೆ ಸಲ್ಲಿಸಿರುವ ಅವರು, ಲೋಕಸಭೆಯಲ್ಲಿ ಬಿಜೆಪಿ ಹಾಗೂ ವಿರೋಧ ಪಕ್ಷದ ವಕ್ತಾರರಾಗಿ ಕಾರ್ಯನಿರ್ವಹಿಸಿದ್ದಾರೆ.
Sushma Swaraj, Won’t Contest, lok sabha Elections