ಹಿಂದೂ–ಮುಸ್ಲಿಂ ದಂಪತಿಗೆ ಪಾಸ್ ಪೋರ್ಟ್ ಗೆ ನೆರವು: ಸುಷ್ಮಾ ಸ್ವರಾಜ್ ವಿರುದ್ಧ ಟ್ರೋಲಿಗರ ಆಕ್ರೋಶ; ನೋವು ಹಂಚಿಕೊಂಡ ವಿದೇಶಾಂಗ ಸಚಿವೆ

ನವದೆಹಲಿ:ಜೂ-25: ಹಿಂದೂ–ಮುಸ್ಲಿಂ ದಂಪತಿಗೆ ಅವಮಾನ ಮಾಡಿದ ಆರೋಪದಲ್ಲಿ ಲಖನೌ ಪಾಸ್‌ಪೋರ್ಟ್‌ ಸೇವಾ ಕೇಂದ್ರದ ಅಧಿಕಾರಿಯನ್ನು ವರ್ಗಾವಣೆ ಮಾಡಿ ದಂಪತಿಗೆ ನೆರವಾಗಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.

ತಮ್ಮನ್ನು ನಿಂದಿಸಿ ಪೋಸ್ಟ್ ಮಾಡಲಾಗಿರುವ ಟ್ವೀಟ್‌ಗಳ ಪೈಕಿ ಕೆಲವನ್ನು ಸಚಿವೆ ಸ್ವರಾಜ್ ಹಂಚಿಕೊಂಡಿದ್ದಾರೆ. ‘ಜೂನ್ 17ರಿಂದ 23ರ ವರೆಗೆ ನಾನು ದೇಶದಲ್ಲಿರಲಿಲ್ಲ. ನಾನು ಗೈರಾಗಿದ್ದಾಗ ಏನಾಗಿದೆಯೋ ನನಗೆ ತಿಳಿದಿಲ್ಲ. ಆದಾಗ್ಯೂ ಕೆಲವು ಟ್ವೀಟ್‌ಗಳ ಮೂಲಕ ನನ್ನನ್ನು ಗೌರವಿಸಲಾಗಿದೆ. ಅವುಗಳನ್ನು ನಿಮ್ಮ ಜತೆ ಹಂಚಿಕೊಳ್ಳುತ್ತೇನೆ. ಅದಕ್ಕಾಗಿ ಅವುಗಳನ್ನು ಲೈಕ್ ಮಾಡಿದ್ದೇನೆ’ ಎಂದು ಸುಷ್ಮಾ ಅವರು ನೋವಿನಿಂದ ಟ್ವೀಟ್ ಮಾಡಿದ್ದಾರೆ.

ಅವರು ಲೈಕ್‌ ಮಾಡಿರುವ ಎರಡು ಟ್ವೀಟ್‌ಗಳು ನಿಂದನಾತ್ಮಕ ಮತ್ತು ಕೋಮು ಭಾವನೆಯಿಂದ ಕೂಡಿದ್ದಾಗಿದೆ.

‘ಪೂರ್ವಗ್ರಹಪೀಡಿತ ನಿರ್ಧಾರ. #ISupportVikasMishra ನಿಮಗೆ ನಾಚಿಕೆಯಾಗಬೇಕು ಮೇಡಂ. ಇದು ನಿಮ್ಮ ಇಸ್ಲಾಮಿಕ್ ಕಿಡ್ನಿಯ ಪ್ರಭಾವವೇ?’ ಎಂದು ಇಂದಿರಾ ಬಾಜ್‌ಪೈ ಎಂಬುವವರು ಟ್ವೀಟ್ ಮಾಡಿದ್ದಾರೆ.

‘ಅವರು ಬಹುತೇಕ ಮೃತಪಟ್ಟ ಮಹಿಳೆ. ಅವರ ಒಂದು ಕಿಡ್ನಿ ಮಾತ್ರ (ಬೇರೆಯವರಿಂದ ಪಡೆದಿರುವುದು) ಕೆಲಸ ಮಾಡುತ್ತಿದೆ ಮತ್ತು ಅದೂ ಸಹ ಯಾವುದೇ ಕ್ಷಣದಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಬಹುದು’ ಎಂದು ಕ್ಯಾಪ್ಟನ್ ಸರಭ್‌ಜಿತ್ ದಿಲ್ಲಾನ್‌ ಎಂಬ ಹೆಸರಿನ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

#IStandWithVikasMishra ಎಂಬ ಹ್ಯಾಷ್‌ಟ್ಯಾಗ್‌ ಜತೆ ಪಾಸ್‌ಪೋರ್ಟ್‌ ಸೇವಾ ಕೇಂದ್ರದ ಅಧಿಕಾರಿ ವಿಕಾಸ್‌ ಮಿಶ್ರಾ ಅವರನ್ನು ಬೆಂಬಲಿಸಿಯೂ ಕೆಲವರು ಟ್ವೀಟ್ ಮಾಡಿದ್ದಾರೆ.

‘ನೀವು ನಿಮ್ಮ ಕೆಲಸ ಮಾಡಿದರೆ ಪ್ರಶ್ನಿಸುತ್ತಾರೆ. ಮಾಡದೇ ಇದ್ದರೆ ಪರಿಪೂರ್ಣರಾಗಿರುತ್ತೀರಿ, ಇದು ಸೋ ಕಾಲ್ಡ್‌ ಹಿಂದೂ ಪರ ಆಡಳಿತ. #IStandWithVikasMishra’ ಎಂದು ಆಥರ್ ಜ್ಯೋತಿ ಎಂಬುವವರು ಟ್ವೀಟ್ ಮಾಡಿದ್ದಾರೆ.

ಶೇಲ್ಡನ್ಸ್ ಕ್ಯಾಟ್ ಎಂಬ ಮತ್ತೊಂದು ಟ್ವಿಟರ್‌ ಖಾತೆಯಲ್ಲಿ, ‘ಸುಷ್ಮಾ ಅವರು ಕಾಂಗ್ರೆಸ್‌ ಸೇರಲು ಬಯಸಿದ್ದಾರೆ. ಅದಕ್ಕಾಗಿ ತಾವು ಪಪ್ಪುಸ್ ಮತ್ತು ಪಿಡಿಸ್‌ಗಳಿಗಿಂತಲೂ ಹೆಚ್ಚು ‘ಸಿಕ್ಯುಲರ್’ ಎಂದು ಬಿಂಬಿಸಲು ಮುಂದಾಗಿದ್ದಾರೆ. ಮುಸ್ಲಿಮರ ಪರ ನಿರ್ಧಾರ ತೆಗೆದುಕೊಂಡಿದ್ದಕ್ಕೆ ನಾಚಿಕೆಯಾಗಬೇಕು. ಪಾಕಿಗಳಿಗೆ ವೀಸಾ ಕೊಡಿಸಿದ್ದಕ್ಕೆ, ಕಾನೂನನ್ನು ದುರ್ಬಳಕೆ ಮಾಡಿಕೊಂಡಿದ್ದಕ್ಕೆ ನಾಚಿಕೆಯಾಗಬೇಕು’ ಎಂದು ಟ್ವೀಟ್ ಮಾಡಲಾಗಿದೆ.

‘ಇವತ್ತಿನಿಂದ ಸುಷ್ಮಾ ಸ್ವರಾಕ್ ಅವರನ್ನು ಅನ್‌ಫಾಲೋ ಮಾಡುತ್ತೇನೆ. ನಿಮ್ಮ ಜಾತ್ಯತೀತತೆ ಹೆಚ್ಚಿಸಿಕೊಳ್ಳಲು ಪ್ರಾಮಾಣಿಕ ಅಧಿಕಾರಿಯನ್ನು ವರ್ಗಾಯಿಸಿದ್ದನ್ನು ಒಪ್ಪಲಾಗದು’ ಎಂದು ರಿಷಿ ಬಾಗ್ರೀ ಎಂಬುವವರು ಟ್ವೀಟ್ ಮಾಡಿದ್ದಾರೆ.

‘ನೀವು ಮುಸ್ಲಿಂ ಆಗಿದ್ದರೆ ದೃಢೀಕರಣ ಬೇಕಾಗಿಲ್ಲ, ಇದು ಪಾಸ್‌ಪೋರ್ಟ್‌ ಮಾತೆ ಸುಷ್ಮಾ ಸ್ವರಾಜ್‌ ಹೊಸ ನಿಯಮ. ಈ ಮಹಿಳೆ ತಮ್ಮ ಕೀಳು ಮನಸ್ಥಿತಿಯಿಂದ ಎಲ್ಲ ಹಿಂದುಗಳ ಭಾವನೆಗಳನ್ನು ನಾಶ ಮಾಡಿದ್ದಾಳೆ. ಆಕೆಯ ಟ್ವಿಟರ್‌ ಮಾತ್ರ ಕೆಲಸ ಮಾಡುತ್ತದೆ, ಆಕೆಯಲ್ಲ’ ಎಂದು ಅನಿರುದ್ಧ್‌ ರೌಟ್ರೆ ಎಂಬುವವರು ಟ್ವೀಟ್ ಮಾಡಿದ್ದಾರೆ.

ನಿಜವಾಗಿಯೂ ನಡೆದಿದ್ದೇನು?: 12 ವರ್ಷಗಳ ಹಿಂದೆ ಮದುವೆಯಾಗಿದ್ದ ಮೊಹಮ್ಮದ್‌ ಅನಾಸ್‌ ಸಿದ್ದಿಕಿ ಮತ್ತು ತನ್ವಿ ಸೇಥ್ ದಂಪತಿ ಬುಧವಾರ ಲಖನೌನ ಪಾಸ್‌ಪೋರ್ಟ್‌ ಕಚೇರಿಗೆ ತೆರಳಿದ್ದಾಗ ತಮಗಾದ ಕಿರುಕುಳ ಹಾಗೂ ಅವಮಾನದ ಬಗ್ಗೆ ಟ್ವೀಟ್‌ ಮಾಡಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರಿಗೆ ಟ್ಯಾಗ್ ಮಾಡಿದ್ದರು. ಹೀಗಾಗಿ, ಪ್ರಾದೇಶಿಕ ಪಾಸ್‌ಪೋರ್ಟ್‌ ಕಚೇರಿಯ ಅಧಿಕಾರಿ ವಿಕಾಸ್‌ ಮಿಶ್ರಾ ಅವರನ್ನು ಗುರುವಾರ ಗೋರಖಪುರಗೆ ವರ್ಗಾವಣೆ ಮಾಡಲಾಗಿತ್ತು. ಜತೆಗೆ ವಿವರಣೆ ಕೇಳಿ ಶೋಕಾಸ್‌ ನೋಟಿಸ್‌ ನೀಡಲಾಗಿತ್ತು. ಇದಾದ ಬಳಿಕ ದಂಪತಿಗೆ ಪಾಸ್‌ಪೋರ್ಟ್‌ ನೀಡಲಾಗಿತ್ತು.

ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಮುಸ್ಲಿಂ ಪತಿಯನ್ನು ಒತ್ತಾಯಿಸಿದ್ದಲ್ಲದೆ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿರುವುದಕ್ಕೆ ಅವರ ಪತ್ನಿಯನ್ನು ನಿಂದಿಸಿದ ಆರೋಪ ವಿಕಾಸ್‌ ಮಿಶ್ರಾ ವಿರುದ್ಧ ಕೇಳಿಬಂದಿತ್ತು. ಹೀಗಾಗಿ ವಿದೇಶಾಂಗ ಇಲಾಖೆ ಕ್ರಮ ಕೈಗೊಂಡಿತ್ತು.

Sushma Swaraj,trolled over Lucknow inter-faith couple’s passport row

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ