ಲೋಕಸಭಾ ಚುನಾವಣೆ: ಮೊದಲ ಹಂತದಲ್ಲಿ 18 ರಾಜ್ಯಗಳ 91 ಲೋಕಸಭಾ ಕ್ಷೇತ್ರಗಳಿಗೆ ಮತದಾನ ಆರಂಭ

ನವದೆಹಲಿ: ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರ ಎಂಬ ಹೆಗ್ಗಳಿಕೆ ಪಡೆದಿರುವ ಭಾರತದಲ್ಲಿ 17ನೇ ಲೋಕಸಭಾ ಸಮರದ ಮೊದಲಹಂತಕ್ಕೆ ಮತದಾನ ಆರಂಭವಾಗಿದೆ. 2 ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ 18 ರಾಜ್ಯಗಳ 91 ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ.ಬೆಳಗ್ಗೆಯಿಂದಲೇ ಮತದಾರರು ಸರತಿ ಸಾಲಿನಲ್ಲಿ ಮತಗಟ್ಟೆಗಳಿಗೆ ಬಂದು ಮತ ಚಲಾಯಿಸುತ್ತಿದ್ದಾರೆ.

ಆಂಧ್ರಪ್ರದೇಶ, ತೆಲಂಗಾಣ, ಒಡಿಶಾ, ಹಾಗೂ ಸಿಕ್ಕಿಂ ರಾಜ್ಯಗಳ ವಿಧಾನಸಭಾ ಚುನಾವಣೆಯೂ ಇಂದೇ ನಡೆಯುತ್ತಿದೆ. ಆಂಧ್ರಪ್ರದೇಶದಲ್ಲಿ 175, ಸಿಕ್ಕಿಂನಲ್ಲಿ 32 ಹಾಗೂ ಒಡಿಶಾದಲ್ಲಿ 28 ಸ್ಥಾನಗಳಿಗೆ ಲೋಕಸಭಾ ಚುನಾವಣೆಯ ಜೊತೆಯಲ್ಲಿಯೇ ಆಸೆಂಬ್ಲಿ ಚುನಾವಣೆ ನಡೆಯುತ್ತಿದೆ.

2014ರಲ್ಲಿ ಆಂಧ್ರಪ್ರದೇಶ ವಿಭಜನೆ ನಂತರ ಮೊದಲ ಬಾರಿಗೆ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು, 25 ಲೋಕಸಭಾ ಹಾಗೂ 175 ಆಸೆಂಬ್ಲಿ ಸ್ಥಾನಗಳಿಗೆ ಏಕಕಾಲದಲ್ಲಿ ಮತದಾನ ನಡೆಯುತ್ತಿದೆ. 319 ಲೋಕಸಭಾ ಹಾಗೂ 2118 ವಿಧಾನಸಭಾ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಕುಪ್ಪಂನಿಂದ, ಅವರ ಮಗ ನಾರಾ ಲೋಕೇಶ್ ಮಂಗಳಗಿರಿಯಿಂದ ವೈಎಸ್ ಆರ್ ಕಾಂಗ್ರೆಸ್ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ, ಪುಲಿವೆಂದುಲಾದಿಂದ ಸ್ಪರ್ಧಿಸಿದ್ದಾರೆ.

ನಿತಿನ್ ಗಡ್ಕರಿ, ಕಿರಣ್ ರಿಜಿಜು, ವಿಕೆ ಸಿಂಗ್ ಮತ್ತಿತರ ಕೇಂದ್ರ ಸಚಿವರ ಸ್ಪರ್ಧಿಸಿರುವ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಮುಕ್ತ ಹಾಗೂ ಶಾಂತಿಯುತ ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ.

ಮೇಘಾಲಯದಲ್ಲಿ ಮತದಾರರು ಬೆಳಗ್ಗೆ 5.30 ಕ್ಕೆ ಮತಗಟ್ಟೆಯ ಮುಂದೆ ಸಾಲುಗಟ್ಟಿ ಕಾದು ಕುಳಿತ ದೃಶ್ಯ ಕಂಡುಬಂದಿದೆ. ಆಂಧ್ರ ಪ್ರದೇಶದ ಅಮರಾವತಿಯಲ್ಲಿ ಸಿಎಂ ಚಂದ್ರಬಾಬು ನಾಯ್ಡು ತಮ್ಮ ಕುಟುಂಬಸ್ಥರೊಂದಿಗೆ ಮತಚಲಾಯಿಸಿದರು. ಇನ್ನು ವೈಎಸ್​ಆರ್​ ಕಾಂಗ್ರೆಸ್​ ಪಕ್ಷದ ಮುಖ್ಯಸ್ಥ ಜಗನ್​ ಮೋಹನ್​ ರೆಡ್ಡಿ ಕಡಪಾ ಲೋಕಸಭಾ ಕ್ಷೇತ್ರದಲ್ಲಿ ಮತದಾನ ಮಾಡಿದರು. ನಂತರ ಮಾತನಾಡಿ, ಜನರು ಈ ಬಾರಿ ಬದಲಾವಣೆ ಬಯಸಿ ಮತ ಚಲಾಯಿಸುತ್ತಾರೆ ಎಂಬ ನಂಬಿಕೆಯಿದೆ. ಎಲ್ಲರೂ ಭಯ ಬಿಟ್ಟು ಮತ ಚಲಾಯಿಸಿ ಎಂದು ಹೇಳಿದ್ದಾರೆ.

ಈ ನಡುವೆ ಇವಿಎಂ ದೋಷದ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶದ ಕುಪ್ಪಂ ವಿಧಾನಸಭೆ ಕ್ಷೇತ್ರದ ರಾಮಕುಪ್ಪಂ, ಗುಡಿಪಲ್ಲಿ ಸೇರಿ 30 ಕಡೆ ಮತದಾನ ವಿಳಂಬವಾಗಿದೆ.

ಏಪ್ರಿಲ್‌ 11ರಿಂದ ಆರಂಭಗೊಳ್ಳುವ ಏಳು ಹಂತಗಳ ಮತದಾನ ಪರ್ವ ಮೇ 19ರವರೆಗೆ ಮುಂದುವರಿಯಲಿದ್ದು, ಮೇ 23ರಂದು ಫಲಿತಾಂಶ ಪ್ರಕಟವಾಗಲಿದೆ.

lok sabha elections,1st phase of polling,91 constituencies begins,

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ