ನವದೆಹಲಿ: ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರು ಸುಪ್ರೀಂ ಕೋರ್ಟ್ ಗೆ ಮುಚ್ಚಿದ ಲಕೋಟೆಯಲ್ಲಿ ನೀಡಿದ್ದ ಲಿಖಿತ ಹೇಳಿಕೆಗಳು ಮಾಧ್ಯಮಗಳಿಗೆ ಸೋರಿಕೆಯಾದ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಪ್ರಕರಣದ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯ್ ನೇತೃತ್ವದ ಸುಪ್ರೀಂ ಕೋರ್ಟ್ ನ ತ್ರಿಸದಸ್ಯ ಪೀಠ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. ಮುಖ್ಯವಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲೋಕ್ ಕುಮಾರ್ ಅವರ ಹೇಳಿಕೆ ಗೌಪ್ಯವಾದದ್ದು ಎಂದು ಪರಿಗಣಿಸಲಾಗಿದ್ದರೂ ಮಾಧ್ಯಮಗಳಿಗೆ ಸೋರಿಕೆಯಾಗಿದ್ದು ಹೇಗೆ ಎಂದು ಪ್ರಶ್ನಿಸಿದೆ.
ಅಲೋಕ್ ಕುಮಾರ್ ಪರ ವಕೀಲ ಫಾಲಿ ಎಸ್ ನಾರಿಮನ್ ಅವರು ನ್ಯಾಯಾಲಯದಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದು, ಮಾಧ್ಯಮಗಳಲ್ಲಿ ಅಲೋಕ್ ಕುಮಾರ್ ಅವರ ಹೇಳಿಕೆ ಸೋರಿಕೆಯಾಗಿರುವ ವಿಚಾರ ತಿಳಿದು ತಮಗೆ ಅಚ್ಚರಿಯಾಯಿತು ಎಂದು ಹೇಳಿದ್ದಾರೆ. ಅಂತೆಯೇ ಸಿಬಿಐ ಆಂತರಿಕ ವಿಚಾರ ಅತ್ಯಂತ ಗೌಪ್ಯ ವಿಚಾರವಾಗಿದ್ದು, ಈ ಸುದ್ದಿ ಬಿತ್ತರಿಸಿದ ನ್ಯೂಸ್ ಪೋರ್ಟಲ್ ಗೆ ಸಮನ್ಸ್ ಜಾರಿ ಮಾಡಬೇಕು ಎಂದು ವಾದ ಮಂಡಿಸಿದ್ದಾರೆ.
ವರದಿ ಬಿತ್ತರಿಸಿದ ನ್ಯೂಸ್ ಪೋರ್ಟಲ್ ಗೂ ಸಮನ್ಸ್ ನೀಡಿ ಸ್ಪಷ್ಟನೆ ಕೇಳಲಾಗುತ್ತದೆ ಎಂದು ನಾರಿಮನ್ ಮಾಹಿತಿ ನೀಡಿದ್ದಾರೆ. ಇನ್ನು ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ನವೆಂಬರ್ 29ಕ್ಕೆ ಮುಂದೂಡಿದೆ.
ಸಿಬಿಐ ನಿರ್ದೇಶಕ ಅಲೋಕ್ ಕುಮಾರ್ ಅವರು ತಮ್ಮನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿರುವ ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದು, ಈ ಬಗ್ಗೆ ನ್ಯಾಯಾಲಯಕ್ಕೆ ತಮ್ಮ ಗೌಪ್ಯ ಹೇಳಿಕೆಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಆದರೆ ಮುಚ್ಚಿದ ಲಕೋಟೆಯಲ್ಲಿ ಅಲೋಕ್ ಕುಮಾರ್ ಅವರು ನೀಡಿದ್ದ ಲಿಖಿತ ಹೇಳಿಕೆ ಮಾಧ್ಯಮಗಳಲ್ಲಿ ಸೋರಿಕೆಯಾಗಿ ವರದಿ ಬಿತ್ತರಿಸಲಾಗಿತ್ತು.
CBI Row, Alok Verma, Supreme Court