ನವದೆಹಲಿ: 2002ರ ಗುಜರಾತ್ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷ ತನಿಖಾ ದಳ ನೀಡಿರುವ ಕ್ಲೀನ್ ಚಿಟ್ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ನ.19ರಂದು ವಿಚಾರಣೆಗೆ ಎತ್ತಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿದೆ.
ಗುಜರಾತ್ ಗಲಭೆಯ ಭಾಗವಾಗಿದ್ದ ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡದಲ್ಲಿ ಕಾಂಗ್ರೆಸ್ನ ಮಾಜಿ ಸಂಸದ ಇಶಾನ್ ಜೆಫ್ರಿ ಅವರೂ ಸೇರಿದಂತೆ ಒಟ್ಟು 69 ಮಂದಿ ಮೃತಪಟ್ಟಿದ್ದರು. 2002ರ ಫೆ.28ರಂದು ನಡೆದ ಈ ಹತ್ಯಾಕಾಂಡದ ಹಿಂದೆ ಗುಜರಾತ್ ನ ಅಂದಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರ ಕೈವಾಡ ಅಡಗಿದೆ ಎಂದು ಆರೋಪಿಸಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ್ದ ಎಸ್ಐಟಿ ನರೇಂದ್ರ ಮೋದಿ ಅವರಿಗೆ ಕ್ಲೀನ್ ಚಿಟ್ ನೀಡಿತ್ತು. ಇದನ್ನು ಪ್ರಶ್ನಿಸಿದ್ದ ಮೃತ ಇಶಾನ್ ಜೆಫ್ರಿ ಪತ್ನಿ ಜಾಕಿಯಾ ಜೆಫ್ರಿ ಅಹಮದಾಬಾದ್ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ, ಹೈಕೋರ್ಟ್ ಎಸ್ಐಟಿ ನೀಡಿದ ವರದಿಯನ್ನೇ ಎತ್ತಿಹಿಡಿದಿತ್ತು. ಇದರಿಂದ ಜಾಕಿಯಾ ಜೆಫ್ರಿ ಅವರು, ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ಈಗ ಜೆಫ್ರಿ ಅವರ ಅರ್ಜಿಯನ್ನು ಮಾನ್ಯ ಮಾಡಿರುವ ಸುಪ್ರೀಂ ಕೋರ್ಟ್ ನ. 19ರಂದು ಅರ್ಜಿಯ ವಿಚಾರಣೆ ನಡೆಸುವುದಾಗಿ ತಿಳಿಸಿದೆ.
2002 Gujarat riots, Narendra Modi,Supreme Court, hear on 19th November,Zakia Jafri,