ಪಂಚಭೂತಗಳಲ್ಲಿ ಲೀನರಾದ ಅನಂತ್‍ಕುಮಾರ್

ಬೆಂಗಳೂರು, ನ.13- ಅಲ್ಪಕಾಲದಲ್ಲೇ ಜನನಾಯಕನಾಗಿ ಹೊರಹೊಮ್ಮಿ, ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿ, ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದ ಕೇಂದ್ರ ಸಚಿವ, ರಾಜ್ಯ ಬಿಜೆಪಿ ಪ್ರಭಾವಿ ನಾಯಕ ಹೆಚ್.ಎನ್. ಅನಂತ್‍ಕುಮಾರ್ ಅವರು ಪಂಚಭೂತಗಳಲ್ಲಿ ಇಂದು ಲೀನವಾದರು. ಅವರು ಇನ್ನು ನೆನಪು ಮಾತ್ರ…!
ಕ್ಯಾನ್ಸ್ಸರ್ ಎಂಬ ಮಹಾಮಾರಿ ರೋಗಕ್ಕೆ ನಿನ್ನೆ ಬೆಂಗಳೂರಿನ ಶಂಕರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದ ಅನಂತ್ ಕುಮಾರ್ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಾಧರಗಳೊಂದಿಗೆ ಬೆಂಗಳೂರಿನ ಚಾಮರಾಜ ಪೇಟೆಯ ಟಿ.ಆರ್.ಮಿಲ್ ಸಮೀಪವಿರುವ ಹಿಂದೂ ರುದ್ರಭೂಮಿಯಲಿ ನೇರವೇರಿತ್ತು. ಅಂತಿಮ ವಿಧಿವಿಧಾನಗಳನ್ನು ಸಹೋದರ ನಂದ ಕುಮಾರ್ ನೆರವೇರಿಸಿಕೊಟ್ಟರು.

ಸರ್ವೆ ಸೌದೆ, ಗಂಧ, ತುಪ್ಪ, ಮುಂತಾದವುಗಳನ್ನು ಬಳಸಿ . ಬಾಕ್ಸ್ ನಂಬರ್ 2 ಮತ್ತು 3 ರ ಮಧ್ಯೆ ಅನಂತ್‍ಕುಮಾರ್ ಅವರ ಚಿತೆಗೆ ಭೂ ಸ್ಪರ್ಶ ಮಾಡಲಾಯಿತು.

ಋಗ್ವೇದ ಆಶ್ವಲಾಯನ ಸ್ಮಾರ್ತ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳು ನಡೆದವು. ಅನಂತಕುಮಾರ್ ಅವರಿಗೆ ಗಂಡು ಮಕ್ಕಳಿಲ್ಲದ ಕಾರಣ ಸೋದರ ನಂದಕುಮಾರ್ ಅಂತಿಮ ವಿಧಿವಿಧಾನಗಳನ್ನು ಪುರೋಹಿತ ಶ್ರೀನಾಥ್ ಮಾರ್ಗದರ್ಶನದಲ್ಲಿ ನೆರವೇರಿಸಿ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.

45 ನಿಮಿಷಗಳ ಕಾಲವಿಧಿ ವಿಧಾನ ಪ್ರಕ್ರಿಯೆಗಳು ನಡೆದವು. ಸರ್ಕಾರಿ ಗೌರವ ಸಲ್ಲಿಸಿದಂತೆ ಕುಶಾಲ ತೋಪು ಸಿಡಿಸಿ, ಭಾರತೀಯ ಸೇನೆಯಿಂದಲೂ ಗೌರವ ಸಲ್ಲಿಸಲಾಯಿತು. ಬಿಜೆಪಿಯ ಆಧಾರಸ್ತಂಭ, ಸಂಘಟನೆಯ ಚತುರನಾಗಿ ಬಹು ಬೇಗನೆ ರಾಜಕೀಯ ಕ್ಷೇತ್ರದಲ್ಲಿ ಬೆಳೆದು ಬಂದ ಅನಂತ್‍ಕುಮಾರ್ ಶಾಶ್ವತ ಇತಿಹಾಸದ ಪುಟ ಸೇರಿದರು.

ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದ ಅನೇಕ ನಾಯಕರು ಆಗಲಿದ ನೆಚ್ಚಿನ ಗೆಳೆಯನನ್ನು ಭಾರವಾದ ಹೃದಯದಿಂದಲೇ ಬೀಳ್ಕೊಟ್ಟರು. ನೆರೆದಿದ್ದ ಅವರ ಅಭಿಮಾನಿಗಳು, ಕಾರ್ಯಕರ್ತರು, ಸ್ನೇಹಿತರು, ಹಿತೈಷಿಗಳು, ಪಕ್ಷದ ಕಾರ್ಯಕರ್ತರು, ವಿವಿಧ ಕ್ಷೇತ್ರಗಳ ಗಣ್ಯರು, ಕೇಂದ್ರ ಸಚಿವರು ಸೇರಿದಂತೆ ಮತ್ತಿತರರು ಅನಂತ್‍ಕುಮಾರ್ ಅಮರ್ ಹೇ, ಮತ್ತೇ ಹುಟ್ಟಿ ಬಾ, ಭಾರತ್ ಮಾತಾ ಕಿ ಜೈ ಎಂಬ ಘೋಷಣೆಗಳನ್ನು ಕೂಗಿದರು.

ನೆರೆದಿದ್ದ ಜನಸ್ತೋಮ ಅನಂತ್‍ಕುಮಾರ್ ಅವರು ಪಕ್ಷಕ್ಕೆ ಸಲ್ಲಿಸಿದ ಸೇವೆ, ಬೆಂಗಳೂರು ಹಾಗೂ ರಾಜ್ಯಕ್ಕೆ ಸಚಿವರಾದ ವೇಳೆ ನೀಡಿದ ಕೊಡುಗೆಗಳನ್ನು ಸ್ಮರಿಸಿ, ಅವರ ನಾಯಕತ್ವವನ್ನು ಗುಣಗಾನ ಮಾಡುತ್ತಿದ್ದರು.

ನೆಚ್ಚಿನ ಸ್ಥಳದಲ್ಲೇ ಅಂತಿಮ ದರ್ಶನ;
ಇದಕ್ಕೂ ಮುನ್ನ್ನ ಅನಂತ್‍ಕುಮಾರ್ ಪಾರ್ಥಿವ ಶರೀರವನ್ನು ಬೆಳಗ್ಗೆ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಇದು ಅವರ ನೆಚ್ಚಿನ ತಾಣವೂ ಹೌದು. ಈ ಹಿಂದೆ ಇದೇ ಸ್ಥಳದಲ್ಲಿ ಅವರು ಸಾವಿರಾರು ಬಾರಿ ಭಾಷಣ ಮಾಡಿದ್ದನ್ನು ಅನೇಕರು ಸ್ಮರಿಸಿದರು.

ಅನೇಕ ರಾಷ್ಟ್ರೀಯ ನಾಯಕರ ಭಾಷಣವನ್ನು ಕನ್ನಡಕ್ಕೆ ಅನಂತ್‍ಕುಮಾರ್ ಭಾಷಾಂತರ ಮಾಡುತ್ತಿದ್ದರು. ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ, ಲಾಲ್‍ಕೃಷ್ಣ ಅಡ್ವಾಣಿ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ನಾಯಕರ ಹಿಂದಿ ಭಾಷಣವನ್ನು ಸ್ಥಳೀಯರಿಗೆ ಅರ್ಥವಾಗುವಂತೆ ಕನ್ನಡದಲ್ಲಿ ಬಹಳ ನಿರರ್ಗಳವಾಗಿ ಹಾಸ್ಯ ಮಿಶ್ರಿತ ಶೈಲಿಯಲ್ಲಿ ಅನುವಾದ ಮಾಡುತ್ತಿದ್ದರು.

ಇಂದು ಅದೇ ಜಾಗದಲ್ಲಿ ಚಿರನಿದ್ರೆಗೆ ಜಾರಿದ್ದ ಅನಂತ್‍ಕುಮಾರ್ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದು ವಿಧಿ ವಿಪರ್ಯಾಸ.!
ಸದಾ ಜನಜಂಗಳಿಯಿಂದ ಗಿಜಿಗುಡುತ್ತಿದ್ದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಇಂದು ಅಕ್ಷರಶ: ಮೌನವೇ ಮಾತಗಿತ್ತು. ಆಗಲಿದ ನೆಚ್ಚನ ನಾಯಕನ ಗುಣಗಾನ ಒಂದು ಕಡೆಯಾದರೆ, ಮ್ತತೊಂದು ಕಡೆ ಇಷ್ಟು ಬೇಗ ಇಂತಹ ಸಾವು ಬಾರಬಾರದಿತ್ತೆಂದು ಪ್ರತಿಯೊಬ್ಬರು ಮಮ್ಮಲ ಮರುಗಿದ ದೃಶ್ಯ ಎಲ್ಲಡೆ ಕಂಡು ಬಂತು.

ಪಕ್ಷದ ಕಾರ್ಯಕರ್ತರು, ಮಹಿಳೆಯರು, ವೃದ್ದರು, ವಿದ್ಯಾರ್ಥಿಗಳು, ವಿವಿಧ ಪಕ್ಷದ ಮುಖಂಡರು, ಬೇರೆ ಬೇರೆ ಕ್ಷೇತ್ರದ ಗಣ್ಯರು, ಸಾಹಿತಿಗಳು, ಬರಹಗಾರರು, ಚಿಂತಕರು, ಚಿತ್ರರಂಗದ ಗಣ್ಯರು, ಸೇರಿದಂತೆ ಅನೇಕರು ಅನಂತ್‍ಕುಮಾರ್ ನೆನೆದು ಕಣ್ಣೀರು ಹಾಕುತ್ತಿದ್ದ ದೃಶ್ಯ ಎಲ್ಲರ ಮನಕಲುಕುವಂತೆ ಇತ್ತು.

ಗಣ್ಯರಿಂದ ಅಂತಿಮ ದರ್ಶನ:
ಅನಂತ್‍ಕುಮಾರ್ ಅವರ ಅಂತಿಮ ದರ್ಶನಕ್ಕೆ ಉಪರಾಷ್ಟ್ರಪತಿ ಸೇರಿದಂತೆ ಕೇಂದ್ರ ಮತ್ತು ರಾಜ್ಯದ ಅನೇಕ ಗಣ್ಯರು ಸಾಕ್ಷಿಯಾದರು.
ಅನಂತ್‍ಕುಮಾರ್ ಅವರ ಸುದೀರ್ಘ ಕಾಲದ ಸ್ನೇಹಿತರಾಗಿದ್ದ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ರಾಜ್ಯಪಾಲ ವಿ.ಆರ್.ವಾಲ, ಕೇಂದ್ರ ಗೃಹ ಸಚಿವ ರಾಜ್‍ನಾಥ್‍ಸಿಂಗ್, ನಿರ್ಮಾಲಾ ಸೀತಾ ರಾಮನ್ ಜೆ.ಪಿ ನಡ್ಡಾ, ಪ್ರಕಾಶ್ ಜಾವ್ಡೇಕರ್ , ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಸೇರಿದಂತೆ ಸಂಸದರು, ಸಚಿವರು, ಶಾಸಕರು, ಬಿಬಿಎಂಪಿ ಸದಸ್ಯರು ಅಂತಿಮ ದರ್ಶನ ಪಡೆದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು, ಚಾಮರಾಜಪೇಟೆಯಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಪತ್ನಿ ತೇಜಸ್ವೀನಿ ಅನಂತ್‍ಕುಮಾರ್ ಹಾಗೂ ಪುತ್ರಿಯರಿಗೆ ಸಾಂತ್ವನ ಹೇಳಿದರು.

ಎಲ್‍ಇಡಿ ಅಳವಡಿಕೆ :
ಅನಂತ್‍ಕುಮಾರ್ ಅವರ ಅಂತ್ಯ ಸಂಸ್ಕಾರವು ಸಾರ್ವಜನಿಕರಿಗೆ ವೀಕ್ಷಿಸಲು ಅನುಕೂಲವಾಗುವಂತೆ ಚಾಮರಾಜ ಪೇಟೆಯ ಹಿಂದೂ ರುದ್ರ ಭೂಮಿಯ ಹೊರಭಾಗದಲ್ಲಿ ಎಲ್‍ಇಡಿ ಸ್ಕ್ರೀನ್ ಗ¼ನ್ನು ಅಳವಡಿಸಲಾಗಿತ್ತು ರಾಜ್ಯದ ನಾನಾ ಭಾಗಗಳಿಂದ ಬಂದ್ದಿದ್ದವರು ಅಗಲಿದ ನಾಯಕನ ಅಂತಿಮ ದರ್ಶನ ಪಡೆದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ