ನವದೆಹಲಿ: ರಾಫೆಲ್ ಜೆಟ್ ಯುದ್ದ ವಿಮಾನ ಖರೀದಿ ಹಗರಣದ ತನಿಖಾ ವರದಿ ಬಹಿರಂಗವಾದರೆ ಪ್ರಧಾನಿ ನರೇಂದ್ರ ಮೋದಿ ಅವರ ಅಸ್ತಿತ್ವವೇ ಅಲುಗಾಡಲಿದೆ.ರಾಫೆಲ್ ಡೀಲ್ ಹಗರಣವನ್ನೇ ಮುಚ್ಚಿಹಾಕಲು ಪ್ರಧಾನಿ ಯತ್ನಿಸುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ರಾಫೆಲ್ ಜೆಟ್ ಯುದ್ಧ ವಿಮಾನ ತಯಾರಿಕಾ ಸಂಸ್ಥೆ ಡಸ್ಸಾಲ್ಟ್ ಏವಿಯೇಷನ್ ಒಪ್ಪಂದ ಬಳಿಕ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಡಿಫೆನ್ಸ್ ಸಂಸ್ಥೆಗೆ 284 ಕೋಟಿ ಹಣ ಪಾವತಿ ಮಾಡಿದೆ. ಇದೇ ಹಣದಿಂದಲೇ ಅನಿಲ್ ಅಂಬಾನಿ ಭೂಮಿ ಖರೀದಿ ಮಾಡಿದ್ದಾರೆ ಈ ಮೂಲಕ ಈ ಹಿಂದೆ ಡಸ್ಸಾಲ್ಟ್ ಏವಿಯೇಷನ್ ನ ಸಿಇಒ ಹೇಳಿದ್ದ ಮಾತು ಸ್ಳುಳ್ಳು ಎಂಬುದು ಸಾಬೀತಾದಂತಾಗಿದೆ ಎಂದು ಹೇಳಿದ್ದಾರೆ.
ಈ ಹಿಂದೆ ಡಸ್ಸಾಲ್ಟ್ ಏವಿಯೇಷನ್ ನ ಸಿಇಒ ಅವರು ರಿಲಯನ್ಸ್ ಸಂಸ್ಥೆಯ ಬಳಿ ಭೂಮಿ ಇದ್ದುದರಿಂದಲೇ ತಾವು ಆ ಸಂಸ್ಥೆಯೊಂದಿಗೆ ಕೈ ಜೋಡಿಸಿದವು ಎಂದು ಹೇಳಿಕೆ ನೀಡಿದ್ದರು. ಆದರೆ ರಫೇಲ್ ವಿಮಾನ ತಯಾರಿಕಾ ಸಂಸ್ಥೆ ಡಸ್ಸಾಲ್ಟ್ ಏವಿಯೇಷನ್ ಒಪ್ಪಂದ ಬಳಿಕ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಡಿಫೆನ್ಸ್ ಸಂಸ್ಥೆಗೆ ಹಣ ಪಾವತಿ ಮಾಡಿದ್ದು, ಅದಾದ ಬಳಿಕವೇ ರಿಲಯನ್ಸ್ ಭೂಮಿ ಖರೀದಿ ಮಾಡಿದೆ. ಹೀಗಾಗಿ ಡಸಾಲ್ಟ್ ನೀಡಿದ್ದ ಹೇಳಿಕೇಯೇ ಸುಳ್ಳು ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಇನ್ನೊಂದು ವಿಚಾರವೇನೆಂದರೆ ಡಸ್ಸಾಲ್ಟ್ ಸಂಸ್ಥೆ ಭಾರತದಲ್ಲಿ ನಷ್ಟದಲ್ಲಿರುವ ಸಂಸ್ಥೆಯೊಂದಿಗೆ ಏಕೆ ಕೈ ಜೋಡಿಸಿತು ಎಂಬುದು ಕೂಡ ಯಕ್ಷ ಪ್ರಶ್ನೆಯಾಗಿದೆ. ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರದ ನೇರ ಕೈವಾಡ ಇದರಲ್ಲಿ ಇದೆ ಎಂಬುದು ಇದರಿಂದಲೇ ಸಾಬೀತಾಗುತ್ತದೆ. ಡಸ್ಸಾಲ್ಟ್ ಏವಿಯೇಷನ್ ಸಿಇಒ ಪ್ರಧಾನಿ ಮೋದಿ ಅವರನ್ನು ರಕ್ಷಣೆ ಮಾಡಲು ಸುಳ್ಳು ಹೇಳುತ್ತಿದ್ದಾರೆ. ಆದರೆ ರಾಫೆಲ್ ಜೆಟ್ ಖರೀದಿ ಹಗರಣದ ತನಿಖಾ ವರದಿ ಬಹಿರಂಗವಾದರೆ ಪ್ರಧಾನಿ ಮೋದಿ ಅವರ ಅಸ್ತಿತ್ವ ಅಲುಗಾಡುತ್ತದೆ. ಆದರೆ ಇದು ಸಾಧ್ಯವಾಗುತ್ತಿಲ್ಲ. ಕಾರಣ ಪ್ರಧಾನಿ ಮೋದಿ ಈ ದೇಶದ ನಿರ್ಣಯಕಾರರಾಗಿದ್ದಾರೆ, ಭ್ರಷ್ಟಾಚಾರ ಈ ಹಗರಣ ಮುಚ್ಚಿ ಹೋಗಲು ಕಾರಣ ಎಂದು ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
ಪ್ರಧಾನಿ ಮೋದಿ ಮತ್ತು ಅನಿಲ್ ಅಂಬಾನಿ ನಡುವೆ ಸುಮಾರು 30 ಸಾವಿರ ಕೋಟಿ ಡೀಲ್ ನಡೆದಿದ್ದು, ಅಂಬಾನಿ ಮತ್ತು ಪ್ರಧಾನಿ ಮೋದಿ ಸ್ನೇಹದಿಂದಾಗಿಯೇ ಡಸ್ಸಾಲ್ಟ್ ಏವಿಯೇಷನ್ ರಿಲಯನ್ಸ್ ನೊಂದಿಗೆ ಕೈ ಜೋಡಿಸಿದೆ ಎಂಬುದು ಸ್ಪಷ್ಟ. ಇವರಿಬ್ಬರ ಸ್ವಾರ್ಥಕ್ಕಾಗಿ ದೇಶದ ಹೆಮ್ಮೆಯ ಸಂಸ್ಥೆ ಎಚ್ ಎಎಲ್ ಅನಾಥವಾಗುವಂತಾಗಿದೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
Rafale deal,Rahul gandhi,PM Narendra Modi