ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆ, ಷೇರುಪೇಟೆಯಲ್ಲಿ ಸಂತಸದ ಹೊನಲು…

ಮುಂಬೈ: ವಿದೇಶಿ ಬಂಡವಾಳದ ಒಳಹರಿವು, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿಕೆಯ ಪರಿಣಾಮ ಶುಕ್ರವಾರ ಮುಂಬೈ ಷೇರು ಸೂಚ್ಯಂಕದ (ಬಿಎಸ್​ಇ) ಆರಂಭಿಕ ವಹಿವಾಟಿನಲ್ಲಿ ಭರ್ಜರಿ 413 ಅಂಶ ಏರಿಕೆ ಕಂಡು 34,845 ಅಂಕಗಳನ್ನ ತಲುಪಿತ್ತು.

ರಾಷ್ಟ್ರೀಯ ಷೇರು ಸೂಚ್ಯಂಕ (ಎನ್​ಎಸ್​ಇ) ಸಹ 122.85 ಅಂಶ ಏರಿಕೆ ಕಂಡು 10,503 ಅಂಕಗಳಲ್ಲಿ ವಹಿವಾಟು ನಡೆಸುತ್ತಿದೆ. ಅಮೆರಿಕ- ಚೀನಾ ವಾಣಿಜ್ಯ ಸಮರದ ನಡುವೆಯೂ ಏಷ್ಯಾದ ಪೇಟೆಗಳು ಸಕರಾತ್ಮಕ ಬೆಳವಣಿಗೆ ಕಾಣುತ್ತಿವೆ. ಬಿಎಸ್​ಇ ಶೇ 1.20 ಮತ್ತು ನಿಫ್ಟಿ ಶೇ 1.18 ರಷ್ಟು ಏರಿಕೆಯಾಗಿವೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಬ್ರೆಂಟ್ ಕಚ್ಚಾ ತೈಲ ದರವು ಏಳು ತಿಂಗಳ ಬಳಿಕ ಕನಿಷ್ಠ ದರಕ್ಕೆ ಇಳಿಕೆಯಾಗಿದೆ. ಶೇ 3.48 ರಷ್ಟು ದರ ಕುಸಿದು 73 ಡಾಲರ್​ನಲ್ಲಿದೆ. ಏಳು ತಿಂಗಳ ಹಿಂದೆ 72.65 ಡಾಲರ್​ ಕನಿಷ್ಠ ದರ ಹೊಂದಿತ್ತು ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಡಾಲರ್ ವಿರುದ್ಧ ಬಲಗೊಳ್ಳುತ್ತಿರುವ ರೂಪಾಯಿ, ಏಷ್ಯಾ ಮಾರುಕಟ್ಟೆಗಳ ವೃದ್ಧಿ, ಮಧ್ಯ ರಾತ್ರಿಯಲ್ಲಿ ಲಾಭಗಳಿಸಿದ ವಾಲ್​ ಸ್ಟ್ರೀಟ್​ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ‘ಚೀನಾ ಜೊತೆಗೆ ವಾಣಿಜ್ಯ ಮಾತುಕತೆ ಉತ್ತಮವಾಗಿ ಸಾಗುತ್ತಿದೆ’ ಎಂಬ ಹೇಳಿಕೆ ಪೇಟೆಯ ಹೂಡಿಕೆದಾರರಲ್ಲಿ ಭರವಸೆ ಮೂಡಿಸಿವೆ. ದೇಶೀಯ ಸಾಂಸ್ಥಿಕ (ಡಿಐಐ) ಹಾಗೂ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ದಿನದ ವಹಿವಾಟಿನಲ್ಲಿ ಆಸಕ್ತಿ ತೋರಿಸಿದ್ದಾರೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ) ಗುರುವಾರದ ಮಾರುಕಟ್ಟೆಯಲ್ಲಿ ₹ 348.75 ಕೋಟಿ ಮೌಲ್ಯದ ಷೇರು ಖರೀದಿ ಮಾಡಿದ್ದರು. ದೇಶೀಯ ಸಾಂಸ್ಥಿಕ ಹೂಡಿಕೆದಾರರು ಸಹ ₹ 509.17 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರು.
ಏಷ್ಯಾನ್​ ಪೇಂಟ್​, ಯೆಸ್ ಬ್ಯಾಂಕ್, ಬಜಾಜ್ ಆಟೋ, ಹೀರೋ ಮೋಟೋ ಕಾರ್ಪ್, ಇಂಡಸ್ಇಂಡಿಂಡ್ ಬ್ಯಾಂಕ್, ಟಾಟಾ ಮೋಟರ್ಸ್, ಎಂಎಂ, ಮಾರುತಿ ಸುಜುಕಿ, ಎಸ್​ಬಿಐ, ಎಲ್&ಟಿ, ಆಕ್ಸಿಸ್ ಬ್ಯಾಂಕ್, ಐಟಿಸಿ, ಭಾರ್ತಿ ಏರ್​ಟೆಲ್, ಎಚ್ಎಲ್ಎಲ್, ಆರ್​ಐಎಲ್, ಕೋಟಾಕ್ ಮತ್ತು ಐಸಿಐಸಿಐ ಬ್ಯಾಂಕ್​ಗಳು ಶೇ. 5.80 ಲಾಭ ಪಡೆದವು.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕ್ಷೀಣಿಸಿದ್ದರಿಂದ ಎಚ್​ಪಿಸಿಎಲ್, ಬಿಪಿಸಿಎಲ್ ಮತ್ತು ಐಒಸಿ ಸೇರಿದಂತೆ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಷೇರು ಮೌಲ್ಯ ಶೇ. 3.76 ರಷ್ಟು ಏರಿಕೆ ಆಗಿವೆ. ಗ್ರಾಹಕ ಬಳಕೆಯ ಉತ್ಪನ್ನ ಹಾಗೂ ತೈಲ ಮತ್ತು ಅನಿಲ ವಲಯದ ಸೂಚ್ಯಂಕ ಸಹ ಧನಾತ್ಮಕ ವಹಿವಾಟು ನಡೆಸಿ ಶೇ 2.65 ರಷ್ಟು ಲಾಭ ಗಳಿಸಿವೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ