
ನವದೆಹಲಿ: ಕರ್ತವ್ಯ ನಿರ್ವಹಿಸುತ್ತಿರುವಾಗಲೇ ಹುತಾತ್ಮರಾದ ಪೊಲೀಸ್ ಸಿಬ್ಬಂದಿಗಳ ಗೌರವದ ಪ್ರತೀಕವಾದ ರಾಷ್ಟ್ರೀಯ ಪೊಲೀಸ್ ಸ್ಮಾರಕವನ್ನು ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ಸಮರ್ಪಿಸಿದರು.
ಸ್ವಾತಂತ್ರ್ಯದ ಬಳಿಕ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಪೊಲೀಸ್ ಸಿಬ್ಬಂದಿಯನ್ನು ಗೌರವಿಸಲು ಈ ಸ್ಮಾರಕ ನಿರ್ಮಿಸಲಾಗಿದೆ. ದೆಹಲಿಯ ಚಾಣಕ್ಯಪುರಿಯಲ್ಲಿ ಶಾಂತಿಪಥಧ ಉತ್ತರ ಭಾಗಕ್ಕೆ 6.12 ಎಕರೆ ವಿಸ್ತಾರದ ಭೂಮಿಯಲ್ಲಿ ಈ ಸ್ಮಾರಕ ನಿರ್ಮಿಸಲಾಗಿದೆ.
ರಾಷ್ಟ್ರೀಯ ಪೊಲೀಸ್ ಸ್ಮಾರಕ (ಎನ್ಪಿಎಂ) 30 ಅಡಿ ಎತ್ತರದ ಏಕಶಿಲಾ ಗ್ರಾನೈಟ್ ಸ್ತಂಭವಾಗಿದ್ದು 238 ಟನ್ ತೂಕವಿದೆ. ಅದರ ತೂಕ ಮತ್ತು ಬಣ್ಣ ಸರ್ವೋಚ್ಚ ತ್ಯಾಗದ ಮಹತ್ವವನ್ನು ಮತ್ತು ಗೌರವವನ್ನು ಸಾರುತ್ತದೆ. ಈ ಶಿಲ್ಪದ ತಳಭಾಗದಲ್ಲಿ ನಿರ್ಮಿಸಲಾದ 60 ಅಡಿ ಉದ್ದದ ನದಿಯು ಪೊಲೀಸ್ ಸಿಬ್ಬಂದಿಗಳು ಶಾಂತಿ ಮತ್ತು ಸಾರ್ವಜನಿಕ ವ್ಯವಸ್ಥೆಯ ಪಾಲನೆಗಾಗಿ ನಿರಂತರ ಸ್ವಯಂ ಸೇವೆ ಸಲ್ಲಿಸುತ್ತಿರುವುದನ್ನು ಸಂಕೇತಿಸುತ್ತದೆ. ಶೌರ್ಯದ ಗೋಡೆಯಲ್ಲಿ 34,844 ಹುತಾತ್ಮರ ಹೆಸರುಗಳನ್ನು ಗ್ರಾನೈಟ್ನಲ್ಲಿ ಕೆತ್ತಲಾಗಿದೆ.
ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೊಲೀಸ್ ಪಡೆಗಳು ಹಾಗೂ ಕೇಂದ್ರ ಪೊಲೀಸ್ ಸಂಘಟನೆಗಳನ್ನು ಈ ಪೊಲೀಸ್ ಸ್ಮಾರಕ ಪ್ರತಿನಿಧಿಸುತ್ತದೆ.
ಸ್ವತಂತ್ರವಾದ ಬಳಿಕ ಇದುವರೆಗೆ 34,844 ಪೊಲೀಸ್ ಸಿಬ್ಬಂದಿ ಕರ್ತವ್ಯದಲ್ಲಿರುವಾಗಲೇ ಪ್ರಾಣತ್ಯಾಗ ಮಾಡಿದ್ದಾರೆ. ಈ ವರ್ಷ 424 ಮಂದಿ ಪರಮೋಚ್ಚ ತ್ಯಾಗ ಮಾಡಿದ್ದಾರೆ. ಇವರಲ್ಲಿ ಬಹುತೇಕ ವೀರ ಯೋಧರು ಕಾಶ್ಮೀರ, ಪಂಜಾಬ್, ಅಸ್ಸಾಂ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ಎಡಪಂಥೀಯ ಉಗ್ರವಾದಿಗಳ ಹಾವಳಿಯ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುವಾಗ ಮೃತಪಟ್ಟಿದ್ದಾರೆ.
ಪೊಲೀಸ್ ಮ್ಯೂಸಿಯಂ ಅನ್ನು ಕೂಡ ಈ ಸಂದರ್ಭದಲ್ಲಿ ದೇಶಕ್ಕೆ ಸಮರ್ಪಿಸಲಾಯಿತು. ಅದರಲ್ಲಿ ಭಾರತೀಯ ಪೊಲೀಸ್ ಇತಿಹಾಸವನ್ನು ರೂಪಿಸಿದ ಕಾಲಘಟ್ಟಗಳು ಮತ್ತು ಕಲಾಕೃತಿಗಳನ್ನು ಇರಿಸಲಾಗಿದೆ.
national-police-memorial,pm modi,dedicates,nation