ನವದೆಹಲಿ:ಆ-13: ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿಂದಂತೆ ರಿಲಯನ್ಸ್ ಡಿಫೆನ್ಸ್ ಸ್ಪಷ್ಟನೆ ನೀಡಿದ್ದು, ಈ ಒಪ್ಪಂದದ ಗುತ್ತಿಗೆ ನೀಡಿರುವುದು ಡಸಾಲ್ಟ್ ಸಂಸ್ಥೆಯೇ ಹೊರತು ಕೇಂದ್ರ ರಕ್ಷಣಾ ಇಲಾಕೆಯಲ್ಲ ಎಂದು ಹೇಳಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ರಿಲಯನ್ಸ್ ಡಿಫೆನ್ಸ್ ಸಂಸ್ಥೆಯ ಸಿಇಒ ರಾಜೇಶ್ ದಿಂಗ್ರಾ ಅವರು, ‘ರಫೆಲ್ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದಂತೆ ರಕ್ಷಣಾ ಸಚಿವಾಲಯ ನಮಗೆ ಯಾವುದೇ ಗುತ್ತಿಗೆ ನೀಡಿಲ್ಲ. ನಾವು ನಮ್ಮ ಸಹವರ್ತಿ ಸಂಸ್ಥೆಯಾದ ಡಸಾಲ್ಟ್ ನಿಂದ ಗುತ್ತಿಗೆ ಪಡೆದಿದ್ದೇವೆ ಎಂದು ಸ್ಪಷ್ಟ ಪಡೆಸಿದ್ದಾರೆ.
ರಫೇಲ್ ಒಪ್ಪಂದವು ಎರಡು ಸರ್ಕಾರಗಳ ನಡುವಣ ಒಪ್ಪಂದವಾಗಿದೆ. ಡಸಾಲ್ಟ್ ಮತ್ತು ನಮ್ಮ ಕಂಪನಿ ಸೇರಿ ‘ಡಸಾಲ್ಟ್ ರಿಲಯನ್ಸ್ ಏರೊಸ್ಪೇಸ್ ಲಿಮಿಟೆಡ್’ ಅನ್ನು ಆರಂಭಿಸಿದ್ದೇವೆ. ಈ ಕಂಪನಿಯಲ್ಲಿ ನಮ್ಮದು ಶೇ 51 ಮತ್ತು ಡಸಾಲ್ಟ್ನದ್ದು ಶೇ 49ರಷ್ಟು ಪಾಲುದಾರಿಕೆ ಇದೆ. ಎರಡೂ ಕಂಪನಿಗಳ ಸಹಭಾಗಿತ್ವಕ್ಕೂ, ಭಾರತ ಸರ್ಕಾರಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಸರ್ಕಾರದ ಒಪ್ಪಂದದ ಪ್ರಕಾರ 36 ಯುದ್ಧವಿಮಾನಗಳೂ ಫ್ರಾನ್ಸ್ನಲ್ಲೇ ತಯಾರಾಗಲಿವೆ. ಹೀಗಾಗಿ ಅವನ್ನು ಭಾರತದಲ್ಲಿ ತಯಾರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಹಾಗಿದ್ದ ಮೇಲೆ ವಿಮಾನ ತಯಾರಿಕೆಯ ಅನುಭವ ನಮ್ಮ ಕಂಪನಿಗೆ ಏಕೆ ಬೇಕು’ ಎಂದು ರಿಲಯನ್ಸ್ ಡಿಫೆನ್ಸ್ ಪ್ರಶ್ನಿಸಿದೆ.
ಇನ್ನು ರಫೆಲ್ ಯುದ್ಧ ವಿಮಾನ ಖರೀದಿಯಲ್ಲಿ ಭಾರಿ ಪ್ರಮಾಣದ ಅವ್ಯವಹಾರ ನಡೆದಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಉದ್ಯಮಿ ಅನಿಲ್ ಅಂಬಾನಿ ಅವರಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಸರ್ಕಾರವು ರಿಲಯನ್ಸ್ ಡಿಫೆನ್ಸ್ ಕಂಪನಿಗೆ ರಫೇಲ್ ಗುತ್ತಿಗೆಯನ್ನು ನೀಡಿದೆ ಎಂದು ಆರೋಪಿಸಿತ್ತು.
Rafale deal,received from Dassault, not defence ministry, Reliance Group