ರಾಫೆಲ್ ಯುದ್ಧ ವಿಮಾನ ಖರೀದಿ ವಿವಾದ: ಡಸ್ಸಾಲ್ಟ್ ಏವಿಯೇಷನ್ ನ ಸಿಇಒ ಎರಿಕ್‌ ಟ್ರ್ಯಾಪಿಯರ್‌ ನೀಡಿದ ಹೇಳಿಕೆಯೇನು…?

ನವದೆಹಲಿ: ರಾಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಪ್ರತಿಕ್ರಿಯೆ ನೀಡಿರುವ ರಫೇಲ್‌ ಯುದ್ಧ ವಿಮಾನ ತಯಾರಿಕಾ ಸಂಸ್ಥೆ ಡಸ್ಸಾಲ್ಟ್ ಏವಿಯೇಷನ್ ನ ಸಿಇಒ ಎರಿಕ್‌ ಟ್ರ್ಯಾಪಿಯರ್‌, ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಸಂಸ್ಥೆಯ ಆಯ್ಕೆ ನಾವು ಮಾಡಿದ್ದೇ ಹೊರತು, ಇದರಲ್ಲಿ ಬೇರೆಯವರ ಹಸ್ತಕ್ಷೇಪವಿಲ್ಲ ಎಂದಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಎರಿಕ್‌ ಟ್ರ್ಯಾಪಿಯರ್‌, ಭಾರತ ಮತ್ತು ಫ್ರಾನ್ಸ್‌ ನಡುವಿನ ರಫೇಲ್‌ ಫೈಟರ್‌ ಜೆಟ್‌ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಆರೋಪಗಳಲ್ಲಿ ಹುರುಳಿಲ್ಲ. ರಫೇಲ್‌ ಡೀಲ್‌ ಬಗ್ಗೆ ನಾನು ಈ ಹಿಂದೆ ಮಾಡಿದ್ದ ಘೋಷಣೆಗಳು, ನೀಡಿದ್ದ ಹೇಳಿಕೆಗಳು ಸತ್ಯ. ಸುಳ್ಳು ಹೇಳುವ ಅಗತ್ಯತೆ ನಮಗಿಲ್ಲ. ನನ್ನ ಸಿಇಓ ಹುದ್ದೆಯಲ್ಲಿ ನೀವಿದ್ದರೆ ನೀವೂ ಸುಳ್ಳು ಹೇಳಲಾರಿರಿ ಎಂದು ಟ್ರ್ಯಾಪಿಯರ್ ಹೇಳಿದ್ದಾರೆ.

ರಾಫೆಲ್ ಡೀಲ್‌ನಲ್ಲಿ ಹೂಡಲ್ಪಟ್ಟಿರುವ ಹಣವು ರಿಲಯನ್ಸ್‌ ಕಂಪೆನಿಗೆ ನೇರವಾಗಿ ಹೋಗುವುದಿಲ್ಲ. ಇದೊಂದು ಜಂಟಿ ಉದ್ಯಮವಾಗಿದ್ದು, ಒಪ್ಪಂದದ ಅನ್ವಯ ಈ ಕಾರ್ಯಕ್ಕಾಗಿ ರಿಲಯನ್ಸ್ ನಂತೆಯೇ ಇನ್ನೂ 30 ಕಂಪನಿಗಳು ಕೈಜೋಡಿಸಿವೆ ಎಂದು ಹೇಳಿದ್ದಾರೆ.

ಇದೇ ವೇಳೆ ಫ್ರೆಂಚ್‌ ಕಂಪೆನಿ ಮತ್ತು ಕಾಂಗ್ರೆಸ್‌ ಪಕ್ಷದೊಂದಿಗಿನ ಹಳೆಯ ಸಂಬಂಧಗಳನ್ನು ನೆನಪಿಸಿಕೊಂಡ ಟ್ರ್ಯಾಪಿಯರ್‌, ‘ನಮ್ಮ ಕಂಪೆನಿ ಭಾರತದೊಂದಿಗೆ ಮೊದಲ ಡೀಲ್‌ ಮಾಡಿಕೊಂಡದ್ದು 1953ರಲ್ಲಿ. ಆಗಿನ ಪ್ರಧಾನಿ ಜವಾಹರಲಾಲ್‌ ನೆಹರೂ ರವರ ಆಡಳಿತಾವಧಿಯಲ್ಲಿ ಎಂದು ಹೇಳಿದ್ದಾರೆ. ನಮಗೆ ಕಾಂಗ್ರೆಸ್ ಪಕ್ಷದೊಂದಿಗೆ ದೀರ್ಘವಾಗಿ ವ್ಯವಹರಿಸಿದ ಅನುಭವವಿದೆ. ನೆಹರೂ ಪ್ರಧಾನಿಯಾಗಿದ್ದಾಗಲೇ ಆರಂಭವಾದ ವ್ಯವಹಾರ ನಂತರದ ಪ್ರಧಾನಿಗಳ ಅವಧಿಯಲ್ಲೂ ಅದು ಮುಂದುವರಿದಿದೆ ಎಂದಿದ್ದಾರೆ.

ಇನ್ನು ತಮ್ಮ ವಿರುದ್ಧ ಹಾಗೂ ತಮ್ಮ ಕಂಪನಿ ವಿರುದ್ಧ ಕಾಂಗ್ರೆಸ್ ಮಾಡಿದ ಆರೋಪದಿಂದ ಬಹಳ ನೋವಾಗಿದೆ. ನಾವು ಭಾರತಕ್ಕೆ ಕೆಲಸ ಮಾಡುತ್ತಿದ್ದೇವೆ ಹೊರತು ಯಾವುದೇ ಪಕ್ಷಕ್ಕೆ ಕೆಲಸ ಮಾಡುತ್ತಿಲ್ಲ. ಭಾರತೀಯ ವಾಯುಪಡೆಗೆ ಮತ್ತು ಭಾರತ ಸರಕಾರಕ್ಕೆ ಅಗತ್ಯವಿರುವ ರಕ್ಷಣಾ ಉತ್ಪನ್ನಗಳನ್ನು ನಾವು ಒದಗಿಸುತ್ತಿದ್ದೇವೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.

Rafale deal,Dassault Aviation CEO, Eric Trappier,Rahul Gandhi

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ