ಮಾರುಕಟ್ಟೆ ಮೌಲ್ಯದಲ್ಲಿ ರಿಲಯನ್ಸ್‌ ನಂ.1

ಹೊಸದಿಲ್ಲಿ : ಷೇರು ಮಾರುಕಟ್ಟೆಯ ಮೌಲ್ಯದ ದೃಷ್ಟಿಯಿಂದ ಮುಕೇಶ್‌ ಅಂಬಾನಿ ಸಾರಥ್ಯದ ರಿಲಯನ್ಸ್‌ಇಂಡಸ್ಟ್ರೀಸ್‌ ಸೋಮವಾರ ಅಗ್ರ ಸ್ಥಾನಕ್ಕೇರಿದೆ.

ಕಳೆದ ಕೆಲವು ದಿನಗಳಿಂದ ರಿಲಯನ್ಸ್‌ ಹಾಗೂ ಟಾಟಾ ಸಮೂಹದ ಟಿಸಿಎಸ್‌ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಕೊನೆಗೂ ಟಿಸಿಎಸ್‌ ಅನ್ನು ಹಿಂದಿಕ್ಕಿದ ಆರ್‌ಐಎಲ್‌, ಭಾರತದ ಅತಿ ದೊಡ್ಡ ಮಾರುಕಟ್ಟೆ ಬಂಡವಾಳದ ಕಂಪನಿಯಾಗಿ ಹೊರಹೊಮ್ಮಿತು.

ಬಿಎಸ್‌ಇನಲ್ಲಿ ಸೋಮವಾರ ರಿಲಯನ್ಸ್‌ ಇಂಡಸ್ಟ್ರೀಸ್‌ ಮಾರುಕಟ್ಟೆ ಮೌಲ್ಯವು 7,82,636 ಕೋಟಿ ರೂ.ಗಳಿಗೆ ಏರಿತು. ಇದೇ ವೇಳೆ ದೇಶದ ಐಟಿ ದಿಗ್ಗಜ ಟಿಸಿಎಸ್‌ ಮಾರುಕಟ್ಟೆ ಮೌಲ್ಯವು 7,69,696 ಕೋಟಿ ರೂ.ಗಳೊಂದಿಗೆ ಎರಡನೇ ಸ್ಥಾನಕ್ಕೆ ಇಳಿಯಿತು.

ಆರ್‌ಐಎಲ್‌ ಷೇರು ದರವು ಸೋಮವಾರ ಕಳೆದ 52 ವಾರಗಳಲ್ಲಿಯೇ ಗರಿಷ್ಠ ಮಟ್ಟಕ್ಕೆ, ಅಂದರೆ 1,238 ರೂ.ಗೆ ಜಿಗಿಯಿತು. ಇದು ಮಾರುಕಟ್ಟೆಯಲ್ಲಿ ನಂ.1 ಸ್ಥಾನಕ್ಕೆ ತಲುಪಲು ಕಾರಣವಾಯಿತು.

ಕಳೆದ ಆಗಸ್ಟ್‌ 16ರಂದು ಟಿಸಿಎಸ್‌, ರಿಲಯನ್ಸ್‌ ಇಂಡಸ್ಟ್ರೀಸ್ ಅನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿತ್ತು. ಆಗಸ್ಟ್‌ 14ರಂದು ರಿಲಯನ್ಸ್‌ ಟಿಸಿಎಸ್‌ ಅನ್ನು ಹಿಂದಿಕ್ಕಿತ್ತು. ಆಗಸ್ಟ್‌ 1ರಂದು ಟಿಸಿಎಸ್‌ ಮೊದಲ ಸ್ಥಾನದಲ್ಲಿ ವಿರಾಜಮಾನವಾಗಿತ್ತು.

ಈ ವರ್ಷ ಏಪ್ರಿಲ್‌ನಲ್ಲಿ ಟಿಸಿಎಸ್‌ ಮೊಟ್ಟ ಮೊದಲ ಬಾರಿಗೆ 100 ಶತಕೋಟಿ ಡಾಲರ್‌ ಮೌಲ್ಯದ ಮೊದಲ ಐಟಿ ಕಂಪನಿಯಾಗಿ ದಾಖಲೆ ನಿರ್ಮಿಸಿತ್ತು. ರಿಲಯನ್ಸ್‌ ಇಂಡಸ್ಟ್ರೀಸ್‌ 2007ರಲ್ಲಿ ಮೊದಲ ಸಲ 100 ಶತಕೋಟಿ ಡಾಲರ್‌ ಮೌಲ್ಯದ ಕಂಪನಿಯಾಗಿ ಹೊರಹೊಮ್ಮಿತ್ತು. ಷೇರುಗಳ ಪ್ರತಿ ದಿನದ ದರಗಳಿಗೆ ಅನುಗುಣವಾಗಿ ಅವುಗಳ ಮಾರುಕಟ್ಟೆ ಮೌಲ್ಯ ಬದಲಾಗುತ್ತಿರುತ್ತದೆ.

ಏನಿದು ಷೇರು ಮಾರುಕಟ್ಟೆ ಮೌಲ್ಯ?

ಷೇರು ಪೇಟೆಯಲ್ಲಿ ನೋಂದಾಯಿತ ಕಂಪನಿಯೊಂದರ ಒಟ್ಟು ಷೇರುಗಳ ಮೌಲ್ಯವೇ ಮಾರುಕಟ್ಟೆ ಮೌಲ್ಯ. ಸಾಮಾನ್ಯವಾಗಿ ಮಾರ್ಕೆಟ್‌ ಕ್ಯಾಪ್‌ ಎನ್ನುತ್ತಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ