ಬೆಂಗಳೂರು:ಜೂ-29: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಂಡಿಸುತ್ತಿರುವುದು 37 ಶಾಸಕರ ಬಜೆಟ್. ಇದಕ್ಕೆ ಕಾಂಗ್ರೆಸ್ನ ಬೆಂಬಲವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವ್ಯಂಗ್ಯವಾಡಿದ್ದಾರೆ.
ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು. ಸ್ವಾತಂತ್ರ್ಯ ನಂತರ 37 ಸ್ಥಾನ ಪಡೆದು ದಯನೀಯವಾಗಿ ಸೋತ ಪಕ್ಷ ಮಂಡಿಸುತ್ತಿರುವ ಬಜೆಟ್ ಇದು. ಬಜೆಟ್ ಮಂಡನೆಯಾಗಲಿ, ನಂತರ ಮುಂದೇನಾಗಲಿದೆ ಎಂದು ಕಾದು ನೋಡೋಣ ಎಂದರು.
ವಿಧಾನಸಭಾ ಚುನಾವಣೆಯಲ್ಲಿ ನಾವು ನಿಶ್ಚಿತವಾಗಿ 130-150 ಸ್ಥಾನ ಗೆಲ್ಲುವ ಆತ್ಮವಿಶ್ವಾಸದೊಂದಿಗೆ ಕೆಲಸ ಮಾಡಿದ್ದೆವು. ಪ್ರಧಾನಿ ಮೋದಿ, ಅಮಿತ್ ಶಾ ಕೇಂದ್ರದ ಹಿರಿಯ ಪದಾಧಿಕಾರಿಗಳು , ಬಿಜೆಪಿ ಮುಖ್ಯಮಂತ್ರಿಗಳು ರಾಜ್ಯ ಪ್ರವಾಸ ಮಾಡಿ ನಮ್ಮ ಪಕ್ಷಕ್ಕೆ ಬಹುಮತ ಬರಲು ವಿಶೇಷ ಪ್ರಯತ್ನ ಮಾಡಿದರು. ಆದರೆ ನಾವು 104 ಸ್ಥಾನಗಳನ್ನು ಮಾತ್ರ ಗೆದ್ದು ಪ್ರತಿಪಕ್ಷದಲ್ಲಿ ಕೂರುವ ಪರಿಸ್ಥಿತಿಗೆ ಬಂದಿದ್ದೇವೆ. ರಾಜ್ಯದ, ದೇಶದ ಯಾವುದೇ ಭಾಗಕ್ಕೆ ಹೋದರೂ ಕೇಳುವ ಪ್ರಶ್ನೆ ಬಿಜೆಪಿ ಹಿನ್ನಡೆಗೆ ಕಾರಣ್ವೇನು..? ಎಂದು. ಏನಾದರೂ ಪ್ರಯತ್ನ ಮಾಡಿ ಇನ್ನೂ ಕಾಲ ಮಿಂಚಿಲ್ಲ. ಹೇಗಾದರೂ ಮಾಡಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಎನ್ನುವ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ ಎಂದರು.
ಬಿಜೆಪಿ ಅತಿ ದೊಡ್ಡ ಪಕ್ಷವಾಗಿ 40 ರಿಂದ 104 ಸ್ಥಾನಕ್ಕೆ ಬಂದು ಮುಟ್ಟಿದರೆ, ಕಾಂಗ್ರೆಸ್ 122 ರಿಂದ79 ಕ್ಕೆ ಕುದಿಸಿದೆ. ಜೆಡಿಎಸ್ 40 ರಿಂದ 37 ಕ್ಕೆ ಕುಸಿದಿದೆ. ಹಿಂದಿನ ಸರ್ಕಾರದ 17 ಸಚಿವರು ಸೋತಿದ್ದಾರೆ. ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ದಯನೀಯವಾಗಿ ಸೋತಿದ್ದು, ಬಾದಾಮಿಯಲ್ಲಿ 1696 ಮತಗಳ ಅಂತರದ ಪ್ರಯಾಸದ ಗೆಲುವು ಕಂಡಿದ್ದಾರೆ. ಶ್ರೀರಾಮುಲು ಅವರು ಇನ್ನು ಒಂದು ದಿನ ಸಮಯ ಹೆಚ್ಚು ನೀಡಿದ್ದರೂ ಅಲ್ಲಿ ರಾಮುಲು ಗೆಲುವು ಸಾಧಿಸುತ್ತಿದ್ದರು. ನಮ್ಮದೇ ತಪ್ಪಿನಿಂದ, ನಮ್ಮದೇ ಲೋಪದೋಶದಿಂದ ನಾವು ನಿರೀಕ್ಷಿತ ಸ್ಥಾನ ಗೆಲ್ಲಿಲಿಲ್ಲ ಎನ್ನುವುದು ನೋವು ತರುವ ಸಂಗತಿ. ಜೆಡಿಎಸ್ 219 ಸ್ಥಾನದಲ್ಲಿ ಸ್ಪರ್ಧಿಸಿ 37 ಸ್ಥಾನ ಗೆದ್ದು 14 ಜಿಲ್ಲೆಯಲ್ಲಿ ಒಂದೂ ಸ್ಥಾನಗಳು ಗೆದ್ದಿಲ್ಲ. ಆ ಪಕ್ಷ ಇಂದು ಆಡಳಿತ ನಡೆಸುತ್ತಿದೆ.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಬಹುಮತ ಬಾರದ ವೇಳೆ ಹಚ್ಚು ಸ್ಥಾನ ಬಂದ ಪಕ್ಷಕ್ಕೆ ಆಹ್ವಾನ ನೀಡುತ್ತಾರೆ. ಅದರಂತೆ ರಾಜ್ಯಪಾಲರು ನಮಗೆ ಅವಕಾಶ ನೀಡಿದರು. ಸ್ವಾತಂತ್ರ್ಯ ನಂತರ ಬಹುಮತ ಸಾಬೀತುಪಡಿಸಲು 15 ದಿನ ಅವಕಾಶ ನೀಡಿದರೂ ಸುಪ್ರೀಂಕೋರ್ಟ್ನಲ್ಲಿ ಮಧ್ಯರಾತ್ರಿ ಕೇಸ್ ನಡೆಸಿ 24 ಗಂಟೆಯಲ್ಲಿ ಬಹುಮತ ಸಾಬೀತುಪಡಿಸಲು ಸೂಚಿಸಿದ ಉದಾಹರಣೆ ಇರಲಿಲ್ಲ. ದೇಶದ ಇತಿಹಾಸದಲ್ಲಿ ರಾಜ್ಯಪಾಲರು ನೀಡಿದ ಸಮಯ ಬಿಟ್ಟು 24 ಗಂಟೆಯಲ್ಲಿ ಬಹುಮತ ಸಾಬೀತುಪಡಿಸಿ ಎಂದ ಮೊದಲ ಘಟನೆ ಇದು. ಅಗ್ನಿ ಪರೀಕ್ಷೆ ರೀತಿ ಎದುರಿಸಿದೆವು. ಬಿಜೆಪಿಗೆ ಬರಲು ಬೇರೆ ಶಾಸಕರು ಸಿದ್ಧವಿದ್ದರೂ ಸಮಯದ ಅಭಾವದಿಂದ ಹಿನ್ನಡೆಯಾಯಿತು ಎಂದರು.
ಚುನಾವಣೆ ಸಮಯದಲ್ಲಿ ಸುಳ್ಳು ಭರವಸೆಯನ್ನು ಜೆಡಿಎಸ್ ಅಧ್ಯಕ್ಷ ಕುಮಾರಸ್ವಾಮಿ ಕೊಟ್ಟು ಜನರಿಗೆ ವಂಚನೆ, ನಂಬಿಕೆ ದ್ರೋಹ ಮಾಡಿದ್ದಾರೆ. ಅಧಿಕಾರಕ್ಕೆ ಬಂದರೂ ಕೊಟ್ಟ ಭರವಸೆ ಈಡೇರಿಸುವ ಕಳಕಳಿ ಇಲ್ಲ. ಒಂದು ವೇಳೆ ಅಪ್ಪ ಮಕ್ಕಳಿಗೆ ಬದ್ಧತೆ ಇದ್ದಿದ್ದರೆ ರಭರವಸೆ ಈಡೇರಿಸುವ ಷರತ್ತು ಹಾಕದೇ ಸಿಎಂ ಆಗಬಾರದಿತ್ತು. ಇದನ್ನು ಬಿಟ್ಟು ಷರತ್ತು ಹಾಕದೇ ಸಿಎಂ ಸ್ಥಾನದಲ್ಲಿ ಕುಳಿತು ಜನರಿಗೆ ದ್ರೋಹವೆಸಗಿದ್ದಾರೆ. ನಾನು ಜನರ ಹಂಗಿನಲ್ಲಿ ಇಲ್ಲ, ಕಾಂಗ್ರೆಸ್ ಹಂಗಿನಲ್ಲಿದ್ದೇನೆ. ನಮಗೆ ಬಹುಮತ ಸಿಕ್ಕಿಲ್ಲ. ಹಾಗಾಗಿ ನಮ್ಮ ಪ್ರಣಾಳಿಕೆ ಈಡೇರಿಕೆ ಸಾಧ್ಯವಿಲ್ಲ ಎಂದು ಸಿಎಂ ಹೇಳುತ್ತಿದ್ದಾರೆ. ನಾವು ಬಹಳ ಎಚ್ಚರಿಕೆಯಿಂದ ಸದನದ ಕಾರ್ಯಕಲಾಪ ಎದುರಿಸಬೇಕು. ಸಚಿವರು ಅಧಿಕಾರ ಸ್ವೀಕರಿಸಿ 22 ದಿನವಾಗಿದೆ. ಆದರೂ ಯಾರೂ ಕೆಲಸ ಮಾಡಿತ್ತಿಲ್ಲ. ಜನರು ಕಂಗಾಲಾಗಿದ್ದಾರೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಭಿವೃದ್ಧಿ ಕಾರ್ಯ ಸ್ಥಿಗಿತಗೊಂಡಿದೆ. 10 ಸಾವಿರ ಕೋಟಿ ಬಾಕಿ ಬಿಲ್ ಪಾವತಿ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ಅಧಿವೇಶನ ಮುಗಿದ ಬಳಕ ರಾಜ್ಯದ ಉದ್ದಗಲ ಹೋರಾಟದ ರೂಪುರೇಷೆ ಸಿದ್ಧಪಡಿಸಿತ್ತೇವೆ. ಅವರೇ ಸರ್ಕಾರವನ್ನು ಅತಂತ್ರ ಸ್ಥಿತಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದರು. ಲೋಕಸಭೆಯಲ್ಲಿ 25 ಸ್ಥಾನ ಗೆಲ್ಲುವ ಪಣ ತೊಟ್ಟು ಕೆಲಸ ಮಾಡಬೇಕು. ನಾಲ್ಕು ವರ್ಷದಲ್ಲಿ ಮೋದಿ ಸರ್ಕಾರದ ಸಾಧನೆ, ಯೋಜನೆ ಮನೆಮನೆಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
BJP,state executive committee meeting,B S Yeddyurappa