ಐಸಿಸಿ ರ್ಯಾಂಕಿಂಗ್ ಪಟ್ಟಿ: 34 ವರ್ಷಗಳಲ್ಲೇ ಕೆಳಮಟ್ಟಕ್ಕೆ ಕುಸಿದ ಪ್ರಬಲ ಆಸ್ಟ್ರೇಲಿಯಾ

ದುಬೈ: ಐಸಿಸಿ ಏಕದಿನ ರ್ಯಾಂಕಿಂಗ್ ನೂತನ ಪಟ್ಟಿ ಬಿಡುಗಡೆಯಾಗಿದ್ದು, 30 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ಕನಿಷ್ಛ ಸ್ಥಾನಕ್ಕೆ ಕುಸಿದಿದೆ.
ಬರೊಬ್ಬರಿ ಐದು ಬಾರಿ ವಿಶ್ವಕಪ್ ಗೆದ್ದು ಕ್ರಿಕೆಟ್ ರಂಗದಲ್ಲಿ ಪ್ರಾಬಲ್ಯ ಸಾಧಿಸಿದ್ದ ಆಸ್ಚ್ರೇಲಿಯಾ ತಂಡ ಇದೀಗ ಕಳೆದ 34 ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಐಸಿಸಿ ರ್ಯಾಂಕಿಂಗ್ ಪಟ್ಟಿಯಲ್ಲಿ ಕನಿಷ್ಠ ಸ್ಥಾನಕ್ಕೆ ಕುಸಿದಿದೆ. ಇತ್ತೀಚಿಗೆ ನಡೆದ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ 5-0 ಅಂತರದಲ್ಲಿ ಆಸ್ಚ್ರೇಲಿಯಾ ತಂಡ ವೈಟ್ ವಾಶ್ ಆಗಿದ್ದು, ಈ ಸರಣಿ ಸೋಲು ಆಸ್ಚ್ರೇಲಿಯಾ ತಂಡದ ಜಂಘಾಬಲವನ್ನೇ ನಡುಗಿಸಿದೆ. ಪರಿಣಾಮ ಐಸಿಸಿ ರ್ಯಾಂಕಿಂಗ್ ಪಟ್ಟಿಯಲ್ಲಿ ಆಸ್ಟೇಲಿಯಾ 6ನೇ ಸ್ಥಾನಕ್ಕೆ ಕುಸಿದಿದ್ದು, ಇಂಗ್ಲೆಂಡ್ ತಂಡ ಅಗ್ರಸ್ಥಾನಕ್ಕೇರಿದೆ.
ಆಸ್ಟ್ರೇಲಿಯಾ ತಂಡ ಕಳೆದ 34 ವರ್ಷಗಳಿಂದ ಅತ್ಯುತ್ತಮ ನಿರ್ವಹಣೆ ತೋರುತ್ತಾ ಬಂದಿತ್ತು. ಐಸಿಸಿ ರ‍್ಯಾಂಕಿಂಗ್​ನಲ್ಲಿ 5 ಮತ್ತು ಅದಕ್ಕಿಂತ ಮೇಲಿನ ಸ್ಥಾನಗಳಲ್ಲೇ ಇತ್ತು. ಎರಡು ವರ್ಷಗಳ ಹಿಂದೆ ಆಸ್ಟ್ರೇಲಿಯಾ ರ‍್ಯಾಂಕಿಂಗ್​ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿತ್ತು. ಆದರೆ, 2017ರ ಜನವರಿಯಿಂದ ಆಸ್ಟ್ರೇಲಿಯಾ ಆಡಿರುವ 15 ಏಕದಿನ ಪಂದ್ಯಗಳಲ್ಲಿ 13ರಲ್ಲಿ ಸೋಲನುಭವಿಸಿದೆ. ಜತೆಗೆ ಭಾರತ, ನ್ಯೂಜಿಲೆಂಡ್​ ಮತ್ತು ಇಂಗ್ಲೆಂಡ್​ ವಿರುದ್ಧದ ದ್ವಿಪಕ್ಷೀಯ ಸರಣಿಗಳಲ್ಲಿ ಸೋಲನುಭವಿಸಿತ್ತು. ಚಾಂಪಿಯನ್ಸ್​ ಟ್ರೋಫಿ ಟೂರ್ನಿಯ ಗ್ರೂಪ್​ ಹಂತದಲ್ಲೇ ಹೊರಬಿದ್ದಿತ್ತು.
ಈ ಎಲ್ಲಾ ಕಾರಣಗಳಿಂದಾಗಿ ಆಸ್ಟ್ರೇಲಿಯಾ ತಂಡ 101 ಅಂಕ ಕಲೆ ಹಾಕಿದ್ದು, 6ನೇ ಸ್ಥಾನದಲ್ಲಿದೆ. 102 ಅಂಕ ಕಲೆ ಹಾಕಿರುವ ಪಾಕಿಸ್ತಾನ 5ನೇ ಸ್ಥಾನದಲ್ಲಿದೆ.
ಭಾರತದಿಂದ ಅಗ್ರ ಸ್ಥಾನ ಕಸಿದ ಇಂಗ್ಲೆಂಡ್
ಇನ್ನು ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ವೈಟ್ ವಾಶ್  ಮಾಡಿದ ಇಂಗ್ಲೆಂಡ್ ತಂಡ ಭಾರತದಿಂದ ಅಗ್ರ ಸ್ಥಾನವನ್ನು ಕಸಿದಿದೆ. ಅಂಕ ಪಟ್ಟಿಯಲ್ಲಿ ಇಂಗ್ಲೆಂಡ್ 124 ಅಂಕಗಳೊಂದಿಗೆ ಅಗ್ರ ಸ್ಥಾನಕ್ಕೇರಿದ್ದು, ಭಾರತ ತಂಡ 122 ಸ್ಥಾನಗಳೊಂದಿಗೆ 2ನೇ ಸ್ಥಾನದಲ್ಲಿ ಮತ್ತು ದಕ್ಷಿಣ ಆಫ್ರಿಕಾ ತಂಡ 113 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿವೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ