ಪ್ರಧಾನಿ ಮೋದಿ- ಕ್ಸಿ ಜಿನ್ ಪಿಂಗ್ ಭೇಟಿ: ಭಾರತದಿಂದ ಚೀನಾಗೆ ಎಲ್ಲಾ ವಿಧದ ಅಕ್ಕಿ ರಫ್ತು ಒಪ್ಪಂದಕ್ಕೆ ಸಹಿ

ಬೀಜಿಂಗ್: ಬ್ರಹ್ಮಪುತ್ರ ನದಿ ನೀರಿನ ಕುರಿತಾದ ಮಾಹಿತಿಯ ಹಂಚಿಕೆ ಒಪ್ಪಂದ ನವೀಕರಣ ಸೇರಿದಂತೆ ಭಾರತದ ಬಾಸುಮತಿಯ ಜೊತೆಗೆ ಇತರ ಎಲ್ಲಾ ವಿಧದ ಅಕ್ಕಿಯನ್ನು ಕೂಡಾ ಚೀನಾಗೆ ರಫ್ತು ಮಾಡಲು ಭಾರತಕ್ಕೆ ಅನುಮತಿ ನೀಡುವ ಕುರಿತಾದ ಶಿಷ್ಟಾಚಾರದ ಒಪ್ಪಂದಕ್ಕೆ ಭಾರತ ಮತ್ತು ಚೀನಾ ಸಹಿಹಾಕಿವೆ.

ಎರಡು ದಿನಗಳ 18ನೇ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಶನಿವಾರ ಚೀನಾದ ಕ್ವಿಂಗ್ಡಾವೊಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಚೀನಿ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿದ ಬಳಿಕ ಉಭಯ ದೇಶಗಳು ಈ ಒಪ್ಪಂದಗಳಿಗೆ ಸಹಿ ಹಾಕಿವೆ ಎಂದು ತಿಳಿದುಬಂದಿದೆ.

ಪ್ರಮುಖವಾಗಿ ಮಳೆಗಾಲದಲ್ಲಿ ಪ್ರವಾಹಕ್ಕೆ ಕಾರಣವಾಗುವ ಬ್ರಹ್ಮಪುತ್ರ ನದಿ ನೀರಿನ ಪ್ರಮಾಣದ ದತ್ತಾಂಶಗಳ ಮಾಹಿತಿಯನ್ನು ಹಂಚಿಕೊಳ್ಳುವ ಕುರಿತ ಒಪ್ಪಂದವನ್ನು ಚೀನಾ ಮತ್ತು ಭಾರತ ನವೀಕರಿಸಿದೆ. ಈ ತಿಳುವಳಿಕಾ ಒಪ್ಪಂದದ ಅನ್ವಯ ಬ್ರಹ್ಮಪುತ್ರ ನದಿಯು ಪ್ರವಾಹ ಪೀಡಿತವಾಗುವ ಮೇ 15ರಿಂದ ಅಕ್ಟೋಬರ್ 15ರವರೆಗಿನ ಅವಧಿಯಲ್ಲಿ ಚೀನಾದಿಂದ ಭಾರತಕ್ಕೆ ಹರಿಯಬಿಡಲಾಗುವ ನದಿ ನೀರಿನ ಪ್ರಮಾಣದ ದತ್ತಾಂಶಗಳನ್ನು ಚೀನಾವು ಭಾರತಕ್ಕೆ ಒದಗಿಸಲಿದೆ.

ಇದರ ಜೊತೆಗೆ ಭಾರತವು ಬಾಸುಮತಿಯಲ್ಲದೆ ಇತರ ಎಲ್ಲಾ ವಿಧದ ಅಕ್ಕಿಯನ್ನು ಚೀನಾಗೆ ರಫ್ತು ಮಾಡಲು ಸಾಧ್ಯವಾಗುವುದಕ್ಕಾಗಿ, ಬೆಳೆ ಆರೋಗ್ಯ ಪ್ರಮಾಣ ಪತ್ರವನ್ನು ನೀಡಲು ಅವಕಾಶ ಮಾಡಿಕೊಡುವ ಶಿಷ್ಟಾಚಾರದ ಒಪ್ಪಂದಕ್ಕೂ ಚೀನಾದ ಕಸ್ಟಮ್ಸ್ ಇಲಾಖೆ ಹಾಗೂ ಭಾರತದ ಕೃಷಿ ಇಲಾಖೆಯ ಅಧಿಕಾರಿಗಳು ಸಹಿಹಾಕಿದ್ದಾರೆ. ಈವರೆಗೆ ಭಾರತವು ಚೀನಾಗೆ ಬಾಸುಮತಿ ಅಕ್ಕಿಯನ್ನು ಮಾತ್ರ ರಫ್ತು ಮಾಡಬಹುದಾಗಿತ್ತು. ಇನ್ನು ಪಾವತಿ ಕೊರತೆಯನ್ನು ಕಡಿಮೆಗೊಳಿಸುವುದಕ್ಕೆ ನೆರವಾಗಲು, ಕೃಷಿ ಉತ್ಪನ್ನಗಳ ರಫ್ತಿಗೆ ಅನುಮತಿ ನೀಡುವಂತೆ ಭಾರತವು ಚೀನಾವನ್ನು ಬಹಳ ಸಮಯದಿಂದ ಆಗ್ರಹಿಸುತ್ತಾ ಬಂದಿದೆ. ಈ ನೂತನ ಒಪ್ಪಂದದಿಂದಾಗಿ ಭಾರತವು ಚೀನಾಗೆ ಇನ್ನು ಮುಂದೆ ಬಾಸುಮತಿ ಮಾತ್ರವಲ್ಲದೆ ಇತರ ತಳಿಯ ಅಕ್ಕಿಗಳನ್ನು ಕೂಡಾ ರಫ್ತು ಮಾಡಬಹುದಾಗಿದೆ.

ಒಪ್ಪಂದಕ್ಕೆ ಮುನ್ನ ಮೋದಿ ಹಾಗೂ ಕ್ಸಿಜಿನ್ ಪಿಂಗ್ ಅವರು ಉಭಯ ದೇಶಗಳ ಬಾಂಧವ್ಯವನ್ನು ಬಲಪಡಿಸುವ ಕುರಿತಾಗಿ ಮಾತುಕತೆ ನಡೆಸಿದರೆಂದು ಭಾರತದ ವಿದೇಶಾಂಗ ಇಲಾಖೆಯ ವಕ್ತಾರ ರವೀಶ್ ಕುಮಾರ್ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ