ಚೀನಾದಲ್ಲಿ ಅಧ್ಯಕ್ಷರ ಅಧಿಕಾರಾವಧಿಗೆ ಇದ್ದ ಮಿತಿ ತೆರವು: ಸರ್ವಾಧಿಕಾರಿಯಾದ ಕ್ಸಿ ಜಿನ್ ಪಿಂಗ್

ಬೀಜಿಂಗ್:ಮಾ-11: ಐತಿಹಾಸಿಕ ಸಾಂವಿಧಾನಿಕ ತಿದ್ದುಪಡಿಯೊಂದನ್ನು ಜಾರಿಗೆ ತಂದಿರುವ ಚೀನಾ ಸರ್ಕಾರ ದೇಶದಲ್ಲಿ ಅಧ್ಯಕ್ಷರ ಅಧಿಕಾರಾವಧಿಗೆ ಇದ್ದ ಮಿತಿ ತೆಗೆದುಹಾಕಿದೆ. ಇದರಿಂದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಮತ್ತೆ ಜಯಗಳಿಸಿದಲ್ಲಿ ಅನಿರ್ದಿಷ್ಟಾವಧಿಯವರೆಗೆ ಆಳ್ವಿಕೆ ಮುಂದುವರೆಸಲಿದ್ದಾರೆ.

ಚೀನಾದಲ್ಲಿ ಇದ್ದ ನಿಯಮದ ಪ್ರಕಾರ ತಲಾ 5 ವರ್ಷಗಳ ಕಾಲ ಎರಡು ಅವಧಿಯವರೆಗೆ ಮಾತ್ರ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಅಧಿಕಾರದಲ್ಲಿ ಇರಲು ಅವಕಾಶವಿತ್ತು. ಆ ಮಿತಿಯನ್ನು ಇದೀಗ ತೆಗೆದುಹಾಕಲಾಗಿದೆ. ಈ ಮೂಲಕ ಚೀನಾ ನಾಯಕ ಕ್ಸಿ ಜಿನ್ ಪಿಂಗ್, ಅಧ್ಯಕ್ಷರ ಅಧಿಕಾರಾವಧಿ ಮಿತಿಯನ್ನು ತೆಗೆದುಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

ಚೀನಾದ ಅತ್ಯಂತ ವಿವಾದಿತ ಸಾಂವಿಧಾನಿಕ ತಿದ್ದುಪಡಿಗೆ, ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ ನ ಸುಮಾರು 3,000 ಜನಪ್ರತಿನಿಧಿಗಳು ಅನುಮೋದನೆ ನೀಡಿದ್ದಾರೆ. ಅನಿರ್ದಿಷ್ಟಾವಧಿಯವರೆಗೆ ಅಧ್ಯಕ್ಷೀಯ ಆಳ್ವಿಕೆ ಅವಧಿಯ ಪರ 2,958 ಸಂಸದರು ಮತ ಚಲಾಯಿಸಿದರೆ ಇಬ್ಬರು ವಿರೋಧಿಸಿದ್ದಾರೆ. ಮೂರು ಮತಗಳು ವಜಾಗೊಂಡಿದ್ದು ಇನ್ನೊಂದು ಮತ ಅಮಾನ್ಯಗೊಂಡಿದೆ.

ಇಂದು ಅಪರಾಹ್ನ ಚೀನಾದ ಟಿಯಾನಮೆನ್ ಸ್ಕ್ವಾರ್ ನಲ್ಲಿ ನಡೆದ ಸಭೆಯಲ್ಲಿ ಈ ಐತಿಹಾಸಿಕ ನಿರ್ಧಾರಕ್ಕೆ ಬರಲಾಯಿತು. ಇದೇ ರೀತಿಯ ಮತ ಚಲಾವಣೆ ಮೂಲಕ ಕ್ಸಿ ಜಿನ್ ಪಿಂಗ್ ಅವರ ಸರ್ವಾಧಿಕಾರವನ್ನು ಕೂಡ ಒಪ್ಪಿಕೊಳ್ಳಲಾಯಿತು. ಚೀನಾವನ್ನು ಮತ್ತೆ ಅತಿ ದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಿಸಲು ಕ್ಸಿ ಅವರಿಗೆ ಕೈಜೋಡಿಸಲು ಮತ್ತೊಂದು ಸಮಯವಾಗಿದೆ ಎಂದು ಸಂಸತ್ತಿನ ಅಧ್ಯಕ್ಷ ಜಾಂಗ್ ದೆಜಿಯಾಂಗ್ ಹೇಳಿದ್ದಾರೆ.

ಚೀನಾದ ಮಾಜಿ ನಾಯಕ ಡೆಂಗ್ ಕ್ಸಿಯಾಪಿಂಗ್ 1982ರಲ್ಲಿ ಜಾರಿಗೆ ತಂದಿದ್ದ ವ್ಯವಸ್ಥೆಯನ್ನು ಇಂದಿನ ಕಾನೂನು ಬದಲಾಯಿಸಿದ್ದು 1966ರಿಂದ 1976ರವರೆಗೆ ದೇಶ ಕಂಡಿದ್ದ ರಕ್ತಸಿಕ್ತ ಸರ್ವಾಧಿಕಾರದಂತಹ ಆಡಳಿತವನ್ನು ತಡೆಯಲಿದೆ. ಕ್ಸಿ ಜಿನ್ ಪಿಂಗ್ ಆಡಳಿತದಡಿಯಲ್ಲಿ ಆರ್ಥಿಕ ನಿಯಂತ್ರಣ ಹೆಚ್ಚು ಸ್ಥಿರವಾಗಿಸಬಹುದು ಎಂಬುದು ಜನನಾಯಕರ ಅಭಿಪ್ರಾಯವಾಗಿದೆ. ಚೀನಾದಲ್ಲಿ ಮೊದಲ ಸಂವಿಧಾನ 1954ರಲ್ಲಿ ಜಾರಿಗೆ ಬಂದಿತು. ಈಗಿರುವ ಸಂವಿಧಾನ 1982ರಿಂದ ಜಾರಿಯಲ್ಲಿದ್ದು 1988,1993, 1999 ಮತ್ತು 2004ರಲ್ಲಿ ತಿದ್ದುಪಡಿ ಕಂಡಿದೆ.

64 ವರ್ಷದ ಕ್ಸಿ ಜಿನ್ ಪಿಂಗ್ ಅವರ ಮೊದಲ 5ವರ್ಷದ ಅಧಿಕಾರಾವಧಿ ಈ ತಿಂಗಳಿಗೆ ಮುಕ್ತಾಯವಾಗಿದೆ. ಇದೀಗ ಎರಡನೇ ಅವಧಿಗೆ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ.
ಕಮ್ಯೂನಿಸ್ಟ್ ಪಾರ್ಟಿ ಆಫ್ ಚೀನಾ ಮತ್ತು ಮಿಲಿಟರಿಯ ಅತ್ಯಂತ ಪ್ರಭಾವಿ ನಾಯಕನಾಗಿರುವ ಕ್ಸಿ ಜಿನ್ ಪಿಂಗ್ ಪಕ್ಷದ ಸ್ಥಾಪಕ ಮಾವೋ ಝೆಡಾಂಗ್ ನಂತರ ಅತಿ ಹೆಚ್ಚು ಅವಧಿಯವರೆಗೆ ಅಧಿಕಾರದಲ್ಲಿರುವ ನಾಯಕರಾಗಿದ್ದಾರೆ.

China,Xi jinping, allowed to remain ‘president for life’, term limits removed

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ