ಪಣಜಿ: ಗೋವಾ ಕಾಂಗ್ರೆಸ್ ನ ಹಿರಿಯ ಮುಖಂಡ ಮತ್ತು ಮಾಜಿ ರಾಜ್ಯಸಭಾ ಸದಸ್ಯ ಶಾಂತಾರಾಮ್ ನಾಯ್ಕ್ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಗೋವಾ ಕಾಂಗ್ರೆಸ್ ಮೂಲಗಳು ಮಾಹಿತಿ ನೀಡಿದ್ದು, 72 ವರ್ಷದ ಶಾಂತಾರಾಮ್ ಅವರು ಮನೆಯಲ್ಲಿರುವಾಗಲೇ ಇಂದು ಬೆಳಗ್ಗೆ ಹೃದಯಾಘಾತವಾಗಿದೆ. ಕೂಡಲೇ ಅವರನ್ನು ಮಾರ್ಗೋಟೌನ್ ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದರು ಎಂದು ಜಿಪಿಸಿಸಿ ಕಾರ್ಯದರ್ಶಿ ಅಲ್ಟಿನೋ ಗೋಮ್ಸ್ ಹೇಳಿದ್ದಾರೆ. ಶಾಂತಾರಾಮ್ ಅವರು ಪತ್ನಿ ಮತ್ತು ಮಗನನ್ನು ಅಗಲಿದ್ದಾರೆ.
ಕಾಂಗ್ರೆಸ್ ಪಕ್ಷದ ನಿಷ್ಛಾವಂತ ನಾಯಕರಾಗಿದ್ದ ಶಾಂತಾರಾಮ್ ಅವರು 1984ರ ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಅಂತೆಯೇ ಪ್ರತ್ಯೇಕ ಗೋವಾ ರಾಜ್ಯ ರಚನೆ ಹೋರಾಟದಲ್ಲೂ ಶಾಂತಾರಾಮ್ ತಮ್ಮನು ತೊಡಗಿಸಿಕೊಂಡಿದ್ದರು. 2005ರಿಂದ 2011ರವರೆಗೆ ಮತ್ತು 2011ರಿಂದ 2017ರವರೆಗೂ ಗೋವಾ ಮೂಲಕ ರಾಜ್ಯಸಭೆಗೆ ಆಯ್ಕೆಯಾಗಿದ್ದರು.
ಪಕ್ಷದಲ್ಲಿ ಯುವಕರಿಗೆ ಆದ್ಯತೆ ನೀಡುವ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿ ಇತ್ತೀಚೆಗಷ್ಟೇ ಜಿಪಿಸಿಸಿ ಅಧ್ಯಕ್ಷ ಗಾದಿಗೆ ರಾಜಿನಾಮೆ ನೀಡಿದ್ದರು. ಅವರ ಸ್ಥಾನಕ್ಕೆ ಚೋಡ್ನಕರ್ ಆಯ್ಕೆಯಾಗಿದ್ದಾರೆ.