ಚುನಾವಣಾ ಪ್ರಚಾರಕ್ಕಾಗಿ ರಾಜ್ಯಕ್ಕೆ ಪ್ರಧಾನಿ ಆಗಮನ: ಟ್ವಿಟರ್ ನಲ್ಲಿ ಸ್ವಾಗತ ಕೋರಿ ಕಾಲೆಳೆದ ಸಿಎಂ: ಮೋದಿ ಜಿ ಬೂಟಾಟಿಕೆ ಬಿಡಿ; ಕನ್ನಡಿಗರು ಕಿವಿಯಲ್ಲಿ ಕಮಲವನ್ನು ಇಟ್ಟುಕೊಂಡಿಲ್ಲ ಎಂದು ಟೀಕೆ

ಬೆಂಗಳೂರು: ಮೇ-೧: ಚುನಾವಣಾ ಪ್ರಚಾರಕ್ಕಾಗಿ ರಾಜ್ಯಕ್ಕೆ ಭೇಟಿ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ವಾಗತ ಕೋರಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್‌ ನಲ್ಲಿ ಹಲವು ಪ್ರಶ್ನೆಗಳನ್ನಿಟ್ಟು ಕಾಲೆಳೆದಿದ್ದಾರೆ.

‘#answerMaadiModi’ ಎಂಬ ಹ್ಯಾಷ್‌ಟ್ಯಾಗ್‌ ನಡಿ ಬರೆದಿರುವ ಸಿಎಂ ಸಿದ್ದರಾಮಯ್ಯ,‘ಪ್ರಿಯ ಮೋದಿ ಅವರೇ, ನೀವು ಕರ್ನಾಟಕಕ್ಕೆ ಬರುತ್ತಿದ್ದೀರಿ ಎಂಬ ಸುದ್ದಿ ಕೇಳಿದೆ. ನಮ್ಮ ರಾಜ್ಯಕ್ಕೆ ನಿಮಗೆ ಸುಸ್ವಾಗತ. ನೀವು ಇಲ್ಲಿಗೆ ಬಂದಾಗ ಕೆಲವು ವಿಚಾರಗಳ ಬಗ್ಗೆ ನಿಲುವು ಸ್ಪಷ್ಟಪಡಿಸಬೇಕು ಎಂದು ಕನ್ನಡಿಗರು ಬಯಸುತ್ತಿದ್ದಾರೆ. ದಯವಿಟ್ಟು ಉತ್ತರಿಸಿ’ ಎಂದು ಕೋರಿದ್ದಾರೆ.

ಇನ್ನು ಜಿ.ಜನಾರ್ದನ ರೆಡ್ಡಿ ಅವರೂ ಇಲ್ಲಿ ನಿಮ್ಮ ಜೊತೆ ರ‍್ಯಾಲಿಯಲ್ಲಿ ಭಾಗವಹಿಸುತ್ತಿದ್ದಾರೆಯೇ? ಬಿಜೆಪಿ 10 ರಿಂದ 15ರಷ್ಟು ಸೀಟುಗಳನ್ನು ಗೆಲ್ಲಲು ನೆರವಾಗುತ್ತಾರೆ ಎಂಬ ನಿರೀಕ್ಷೆಯಿಂದ ಅವರ ಕುಟುಂಬಸ್ಥರು ಹಾಗೂ ಗೆಳೆಯರು ಸೇರಿದಂತೆ ಎಂಟು ಮಂದಿಗೆ ಟಿಕೆಟ್‌ ನೀಡಿದ್ದೀರಿ. ಇಷ್ಟೆಲ್ಲ ಆಗಿಯೂ ನೀವು ಭ್ರಷ್ಟಾಚಾರದ ಕುರಿತು ನಮಗೆ ಉಪದೇಶ ನೀಡುತ್ತೀರಿ. ಈ ಬೂಟಾಟಿಕೆಯನ್ನು ದಯವಿಟ್ಟು ಬಿಟ್ಟುಬಿಡಿ. ಕನ್ನಡಿಗರು ಕಿವಿಯಲ್ಲಿ ಕಮಲವನ್ನು ಇಟ್ಟುಕೊಂಡಿಲ್ಲ.

ನೀವು ಮೊದಲು, ಕಳಂಕಿತ ಬಿಎಸ್‌ವೈ ಅವರನ್ನು ಕರ್ನಾಟಕದಲ್ಲಿ ನಿಮ್ಮ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಾಡಿದಿರಿ. ಈಗ ನೀವು ರ‍್ಯಾಲಿಗಳಲ್ಲಿ ಅವರ ಜೊತೆ ವೇದಿಕೆ ಹಂಚಿಕೊಳ್ಳಲು ಬಯಸುತ್ತಿಲ್ಲ ಎಂದು ಮಾಧ್ಯಮ ವರದಿಗಳು ಹೇಳುತ್ತಿವೆ! ಯಡಿಯೂರಪ್ಪ ಅವರೇ ಈಗಲೂ ನಿಮ್ಮ ಮುಖ್ಯಮಂತ್ರಿ ಅಭ್ಯರ್ಥಿಯೇ ಎಂಬುದನ್ನು ತಿಳಿದುಕೊಳ್ಳಲು ಕರ್ನಾಟಕ ಬಯಸುತ್ತಿದೆ.

ಅತ್ಯಾಚಾರ ಆರೋಪಿಗಳಿಗೆ ಹಾಗೂ ವಿಧಾನಸಭೆಯಲ್ಲಿ ಅಶ್ಲೀಲಚಿತ್ರಗಳನ್ನು ವೀಕ್ಷಿಸಿದ ಶಾಸಕರಿಗೆ ಕರ್ನಾಟಕದಲ್ಲಿ ಟಿಕೆಟ್‌ ನೀಡಿದ್ದೀರಿ. 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಬಿಜೆಪಿ ಶಾಸಕರಿಗೆ ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಆದಿತ್ಯನಾಥ ಅವರು ರಕ್ಷಣೆ ನೀಡುತ್ತಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನಿಮ್ಮ ಪಕ್ಷದ ಶಾಸಕರು ಮಗುವಿನ ಮೇಲೆ ಅತ್ಯಾಚಾರ ನಡೆಸಿದವರ ಪರ ವಹಿಸುತ್ತಾರೆ. ಇಷ್ಟೆಲ್ಲ ಆಗಿಯೂ ನಿಮ್ಮ ಪಕ್ಷವು ಕರ್ನಾಟಕದ ಅತ್ಯಾಚಾರ ಪ್ರಕರಣಗಳನ್ನು ರಾಜಕೀಯಗೊಳಿಸುವಂತಹ ಶಬ್ದಾಡಂಬರಗಳಿಂದ ಕೂಡಿದ ಜಾಹೀರಾತುಗಳನ್ನು ನೀಡುತ್ತಿದೆಯಲ್ಲವೇ? ಎಂದು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

PM Modi Begins Karnataka Campaign, CM Siddaramaiah, Tweet Attack

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ