ನವದೆಹಲಿ:ಏ-೨೬: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ರಾಜಕೀಯ ಪಕ್ಷಗಳು ಪೈಪೋಟಿಗೆ ಬಿದ್ದಂತೆ ಮತದಾರರನ್ನು ಸೆಳೆಯಲು ತಂತ್ರ ರೂಪಿಸುತ್ತಿವೆ. ಈ ನಿಟ್ಟಿನಲ್ಲಿ ಚುನಾವಣೆಗೆ ವಿಭಿನ್ನ ರೀತಿಯಲ್ಲಿ ಪ್ರಚಾರ ಮಾಡುವ ಮೂಲಕ ಮತದಾರರ ಗಮನ ಸೆಳೆಯಲು ಪ್ರಧಾನಿ ಮೋದಿ ಮುಂದಾಗಿದ್ದು, ಇಂದು ನಮೋ ಆ್ಯಪ್ ಮೂಲಕ ತಮ್ಮ ಅಭ್ಯರ್ಥಿಗಳೊಂದಿಗೆ ಸಂವಾದ ನಡೆಸಿದರು.
ಕನ್ನಡದಲ್ಲಿ ಮಾತು ಆರಂಭಿಸಿದ ಪ್ರಧಾನಿ ಮೋದಿ, ಎಲ್ಲರಿಗೂ ನಮಸ್ಕಾರ. ನಾನು ಕನ್ನಡ ಕಲಿತಿಲ್ಲ ಹಾಗಾಗಿ ಇಂಗ್ಲೀಷ್ ಅಥವಾ ಹಿಂದಿಯಲ್ಲಿ ಸಂವಾದವನ್ನು ಮುಂದುವರೆಸುತ್ತೇನೆ.. ಆದರೆ ನನ್ನನ್ನೂ ಕನ್ನಡಿಗ ಎಂದು ಪರಿಗಣಿಸಿ ನಮ್ಮನ್ನು ಬೆಂಬಲಿಸಿ. ನಾನು ಕರ್ನಾಟಕದ ಬಿಜೆಪಿ ಕಾರ್ಯಕರ್ತ ಎಂದು ಭಾವಿಸಿ ಎಂದರು. ಈ ಬಾರಿ ಕರ್ನಾಟಕದಲ್ಲಿ ಕಮಲ ಅರಳಲಿದೆ ಎಂದರು. ಯುಪಿಎ ಸರ್ಕಾರದ ವೈಫಲ್ಯಗಳನ್ನು ಹೇಳಿದರು. ಕೇಂದ್ರ ಸರ್ಕಾರದ ಸಾಧನೆಗಳನ್ನು ಮುಂದಿಟ್ಟು ಮತಗಳನ್ನು ಕೇಳಬೇಕು ಎಂದರು. ಇನ್ನು 15 ದಿನ ವಿರಮಿಸದೆ ಕಾರ್ಯಕರ್ತರು ಹೋರಾಟ ಮಾಡಿದಲ್ಲಿ ಗೆಲುವು ನಮ್ಮದಾಗಲಿದೆ ಎಂದರು.
ಅಭಿವೃದ್ಧಿ ವಿಷಯದಿಂದ ಮಾತ್ರ ನಾವೂ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದು, ಇದೊಂದು ಕಾರಣಕ್ಕೆ ವಿರೋಧ ಪಕ್ಷದವರು ನಮ್ಮನ್ನು ಎಂದಿಗೂ ಸೋಲಿಸುವುದಿಲ್ಲ ಎಂಬ ಭಾವನೆ ಇದೆ ಎಂದು ಮೋದಿ ಹೇಳಿದರು. ಕರ್ನಾಟಕ ರಾಜ್ಯದ ಅಭಿವೃದ್ಧಿಗೆ ಬಿಜೆಪಿ 5 ಸೂತ್ರ ರೂಪಿಸಿದ್ದು, ಅಭಿವೃದ್ಧಿಯೇ ನಮ್ಮ ಮೊದಲ ಆದ್ಯತೆ ಎಂದು ಮೋದಿ ಹೇಳಿದ್ದಾರೆ.
ಮುಖ್ಯವಾಗಿ ಬೂತ್ ಮಟ್ಟದ ಕಾರ್ಯಕರ್ತರೇ ನಮ್ಮ ಪಕ್ಷದ ಬಲ. ಇಡೀ ವಿಶ್ವವೇ ಎದುರಾದರೂ ನಮ್ಮ ಸಂಘಟನೆಯ ಶಕ್ತಿ ಕುಗ್ಗಿಸಲು ಸಾಧ್ಯವಿಲ್ಲ. ರಾಜ್ಯದ ರೈತರ ಆತ್ಮಹತ್ಯೆಗೆ ಕಾರಣಗಳು ಹಾಗೂ ಅದಕ್ಕೆ ಪರಿಹಾರ ಕ್ರಮಗಳನ್ನೂ ಪ್ರಧಾನಿ ಮೋದಿ ಸಂವಾದದ ವೇಳೆ ತಿಳಿಸಿದರು. ಇನ್ನು ಗಂಧದ ನಾಡು ಎಂದೇ ಹೆಸರು ಗಳಿಸಿರುವ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ನಿದ್ದೆ ಮಾಡುತ್ತಿರುವುದರಿಂದ, ಗಂಧದ ಮಾರುಕಟ್ಟೆ ಆಸ್ಟ್ರೇಲಿಯಾದಲ್ಲಿ ದೊಡ್ಡದಾಗಿದೆ. ನಾವು ಅಧಿಕಾರಕ್ಕೆ ಬರುತ್ತಿದ್ದಂತೆ ಮತ್ತೆ ಗಂಧದ ಮರ ಬೆಳೆಯಲು ಅನುಕೂಲ ಮಾಡಿಕೊಡುವುದಾಗಿ ಮೋದಿ ಹೇಳಿದರು.
ಇನ್ನು ಬೆಂಗಳೂರಿನತ್ತ ಇಡೀ ವಿಶ್ವವೇ ಬೆರಗುಗಣ್ಣಿನಿಂದ ನೋಡುತ್ತಿದೆ. ಮತದಾರರ ವಿಶ್ವಾಸ ಗಳಿಸಿದರೆ ಅಧಿಕಾರ ನಮ್ಮದೇ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ ಬಿಜೆಪಿ ಅಭಿವೃದ್ಧಿ ರಾಜಕೀಯಕ್ಕೆ ಮಹತ್ವ ನೀಡಿದ್ದು, ಜಾತಿ, ಧರ್ಮ, ಸಮುದಾಯ ವಿಭಜನೆ ಬಿಜೆಪಿ ಗುರಿಯಲ್ಲ. ಅಭಿವೃದ್ಧಿ ಅಂಜೆಡಾ ಮೇಲೆಯೇ ನಾವು ಚುನಾವಣೆ ಸ್ಪರ್ಧಿಸಬೇಕು ಎಂದು ಸಲಹೆ ನೀಡಿದರು.
ಕೇಂದ್ರ ಸರ್ಕಾರ ಕರ್ನಾಟಕಕ್ಕಾಗಿ ಸುಮಾರು 14 ಸಾವಿರ ಕೋಟಿ ಮೌಲ್ಯ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು, ಕೇಂದ್ರದ ಬಿಜೆಪಿ ಸರ್ಕಾರದಲ್ಲಿ ಕರ್ನಾಟಕದಲ್ಲಿ ಸಾಕಷ್ಚು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಕಾಂಗ್ರೆಸ್ ಸರ್ಕಾರದ ನಾಲ್ಕು ವರ್ಷಗಳ ಅವಧಿಯಲ್ಲಿ ಆ ಸರ್ಕಾರ ಮೂಲಸೌಕರ್ಯಾಭಿವೃದ್ಧಿಯಲ್ಲಿ ಕೇವಲ 400 ಕೋಟಿ ರು. ಹಣವನ್ನು ವ್ಯಯಿಸಿತ್ತು. ಆದರೆ ಬಿಜೆಪಿ ಸರ್ಕಾರ ಇದೇ 4 ವರ್ಷಗಳ ಅವಧಿಯಲ್ಲಿ 1600 ಕೋಟಿ ಹಣ ವ್ಯಯಿಸಿದೆ. ನಾಲ್ಕು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ 2 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಿದ್ದರೆ, ಇದೇ ಅವಧಿಯಲ್ಲಿ ಬಿಜೆಪಿ ಸರ್ಕಾರ 7800 ಮೆಗಾ ವ್ಯಾಟ್ ವಿದ್ಯುತ್ ಉತ್ಬಾದನೆ ಮಾಡಿದೆ. ಉಜ್ವಲ ಯೋಜನೆ ಅಡಿಯಲ್ಲಿ 9 ಲಕ್ಷ ಉಚಿತ ಎಲ್ ಪಿಜಿ ಸಂಪರ್ಕ ಕಲ್ಪಿಸಿದೆ. ಯುಪಿಎ ಅವಧಿಯಲ್ಲಿ 20 ಲಕ್ಷ ಶೌಚಾಲಯ ನಿರ್ಮಾಣವಾಗಿತ್ತು, ಆದರೆ ಎನ್ ಡಿಎ ಸರ್ಕಾರದ ಅವಧಿಯಲ್ಲಿ 2100 ಕೋಟಿ ವೆಚ್ಚದಲ್ಲಿ 34 ಲಕ್ಷ ಶೌಚಾಲಯ ನಿರ್ಮಾಣವಾಗಿದೆ ಎಂದು ಮೋದಿ ಹೇಳಿದರು.
Karnataka Assembly Election,PM Modi’s video interaction,BJP MPs & MLAs