ಸಿಎಂ ಸಿದ್ದರಾಮಯ್ಯ ಸರ್ಕಾರ ಜನಪರ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಕರ್ನಾಟಕವನ್ನು ದೇಶದಲ್ಲಿಯೇ ನಂಬರ್ 1 ರಾಜ್ಯವನ್ನಾಗಿ ಮಾಡಿದೆ: ಸೋನಿಯಾ ಗಾಂಧಿ

ವಿಜಯಪುರ:ಮೇ-8:ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಕರ್ನಾಟಕವನ್ನು ದೇಶದಲ್ಲಿಯೇ ನಂಬರ್ 1 ರಾಜ್ಯವನ್ನಾಗಿ ಮಾಡಿದೆ ಎಂದು ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಹೇಳಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಇದೇ ಮೊದಲ ಬಾರಿಗೆ ಚುನಾವಣಾ ಅಖಾಡಕ್ಕೆ ಇಳಿದಿದ್ದು, ವಿಜಯಪುರದ ಬಿಎಲ್‌ಡಿಇ ಮೈದಾನದಲ್ಲಿ ಪ್ರಚಾರ ಕೈಗೊಂಡು ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದರು.

ಸಿದ್ದರಾಮಯ್ಯ ಸರ್ಕಾರ ಇಲ್ಲಿನ ಜನರಿಗೆ ಅನ್ನಭಾಗ್ಯ, ಕೃಷಿ ಭಾಗ್ಯ ಸೇರಿದಂತೆ ಹಲವು ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದೆ. ಇಂದಿರಾ ಕ್ಯಾಂಟಿನ್‌ ಮೂಲಕ ಹಸಿದವರಿಗೆ ಅನ್ನ ನೀಡಿದ್ದಾರೆ. ಕೇವಲ 10 ರೂ. ಗೆ ಊಟ ನೀಡುವ ಮೂಲಕ ಬಡ ಜನತೆಗೆ ನೆರವಾಗಿದ್ದಾರೆ. ಇದೊಂದು ಐತಿಹಾಸಿಕ ನಿರ್ಣಯವಾಗಿದೆ. ರಾಜ್ಯದ ಜನರ ಏಳಿಗೆಗಾಗಿ ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ದೇಶದಲ್ಲೇ ಕರ್ನಾಟಕವನ್ನು ಸಿದ್ದರಾಮಯ್ಯ ನಂಬರ್‌ ಒನ್‌ ಸ್ಥಾನಕ್ಕೆ ಏರಿಸಿದ್ದಾರೆ ಎಂದು ಶ್ಲಾಘಿಸಿದರು.

ಅನೇಕ ಅಡ್ಡಿ ಆತಂಕಗಳ ನಡುವೆ ಸಿದ್ದರಾಮಯ್ಯ ಛಲ ಬಿಡದೇ ಸಾಧಿಸಿ ತೋರಿಸಿದ್ದಾರೆ. ನರೇಗಾ ಯೋಜನೆಗೆ ಈಗಿನ ಪ್ರಧಾನಿ ನರೇಂದ್ರ ಮೋದಿ ವಿರೋಧಿಸಿದ್ದರು. ಆದರೆ ನಾವು ಬಡವರ ನೆರವಿಗೆ ನಿಂತೆವು. ಕರ್ನಾಟಕದಲ್ಲಿ ರೈತರು ಸಂಕಷ್ಟಕ್ಕೊಳಗಾಗಿದ್ದಾರೆ. ಸತತ ಬರಗಾಲದಿಂದ ಸೋತ ರೈತರ ನೆರವಿಗೆ ರಾಜ್ಯ ಸರ್ಕಾರ ನಿಂತಿದೆ. ಯಾವಾಗ ನಮ್ಮ ಸಿದ್ದರಾಮಯ್ಯ ರೈತರ ನೆರವಿಗೆ ಬರುವಂತೆ ಕೇಂದ್ರಕ್ಕೆ ಮನವಿ ಮಾಡಿದರು, ಆದರೆ ಪ್ರಧಾನಿ ಸಿಎಂ ಭೇಟಿಗೂ ಅವಕಾಶವನ್ನೇ ನೀಡಲಿಲ್ಲ. ಇದು ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಯಾಗಿದೆ ಎಂದರು.

ಪ್ರಧಾನಿ ಕೇವಲ ಮಾತುಗಳಲ್ಲಿ ಮನೆ ಕಟ್ಟಲು ಹೊರಟಿದ್ದಾರೆ. ಅದರಿಂದ ಎಲೆಕ್ಷನ್‌ ಗೆಲ್ಲಲು ಸಾಧ್ಯವಾಗಲ್ಲ ಎಂದ ಸೋನಿಯಾಗಾಂಧಿ, ದೇಶದ ನೈಜ ಸಮಸ್ಯೆಗಳ ಬಗ್ಗೆ ಪ್ರಧಾನಿ ಮೋದಿಗೆ ಕಾಳಜಿ ಇಲ್ಲ, ದಲಿತರು, ಮಹಿಳೆಯರು, ಮಕ್ಕಳಿಗಾಗಿ ಏನು ಮಾಡಿದ್ದಾರೆ, ಭ್ರಷ್ಟಾಚಾರದಲ್ಲಿ ಮುಳುಗಿರುವ ನಿಮ್ಮ ಸಚಿವರುಗಳ ಬಗ್ಗೆ ನಿಮ್ಮ ನಿಲುವು ಏನು ಎಂದು ಪ್ರಧಾನಿ ಮೊದಲು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

ಇನ್ನು ಪ್ರಧಾನಿ ಮೋದಿ ದೇಶವನ್ನು ಕಾಂಗ್ರೆಸ್‌ ಮುಕ್ತ ಮಾಡುವುದಾಗಿ ಹೇಳಿದ್ದಾರೆ. ಅದು ಅವರ ಕನಸು, ಅದು ಎಂದಿಗೂ ನನಸಾಗಲು ಸಾಧ್ಯವಿಲ್ಲ ಎಂದು ಸೋನಿಯಾ ಗಾಂಧಿ ವಾಗ್ದಾಳಿ ನಡೆಸಿದರು.

Karnataka assembly election,UPA chairperson and former Congress president Sonia Gandhi, addresses rally Vijayapura

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ