ಎರಡು ರಾಷ್ಟ್ರೀಯ ಪಕ್ಷಗಳ ಭ್ರಷ್ಟ ಆಡಳಿತದಿಂದ ಜನತೆ ಬೇಸತ್ತಿದ್ದು, ಜೆಡಿಎಸ್ ಪರ ರಾಜ್ಯದ ಜನರ ಒಲವು ಹೆಚ್ಚಾಗಿದೆ: ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ

ಹುಬ್ಬಳ್ಳಿ:ಏ-೭: ಎರಡು ರಾಷ್ಟ್ರೀಯ ಪಕ್ಷಗಳ ಭ್ರಷ್ಟ ಆಡಳಿತ ನೋಡಿ ರಾಜ್ಯದ ಜನರು ಬೇಸತ್ತಿದ್ದಾರೆ. ಹೀಗಾಗಿ, ಜೆಡಿಎಸ್ ಪರ ರಾಜ್ಯದ ಜನರ ಒಲವು ಹೆಚ್ಚಾಗಿದ್ದು ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಭಯ ಉಂಟಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹೇಳಿದ್ದಾರೆ.

113 ಸೀಟ್​ಗಳನ್ನು ನಾವು ಕ್ರಾಸ್ ಮಾಡುತ್ತೇವೆ ಎಂಬ ಸಂಪೂರ್ಣ ವಿಶ್ವಾಸವಿದೆ. ಯಾವ ಪಕ್ಷಗಳ ಬೆಂಬಲ ಪಡೆಯದೇ ಸ್ವತಂತ್ರವಾಗಿ ಸರ್ಕಾರ ರಚನೆ ಮಾಡುತ್ತೇವೆ. ಉತ್ತರ ಕರ್ನಾಟಕದಲ್ಲಿ 45 ಸ್ಥಾನಗಳನ್ನು ಗೆಲ್ಲುತ್ತೇವೆ. ಹಳೆ ಕರ್ನಾಟಕದಲ್ಲಿ 75 ಸ್ಥಾನಗಳನ್ನು ಗೆಲ್ಲುತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹುಬ್ಬಳ್ಳಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಯಾವ ಪಕ್ಷಗಳನ್ನು ಸೋಲಿಸುವ ಉದ್ದೇಶವಿಲ್ಲ. ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸುವುದೊಂದೇ ನನ್ನ ಗುರಿ ಎಂದರು. ಪ್ರಜ್ವಲ್​ಗೆ ಟಿಕೆಟ್ ನೀಡಲು ಕಾರ್ಯಕರ್ತರ ಒತ್ತಡ ವಿಚಾರದ ಕುರಿತು ಪ್ರತಿಕ್ರಿಯಿಸಿದರು. ನಾವು ಕುಟುಂಬ ರಾಜಕಾರಣ ಮಾಡುವುದಿಲ್ಲ. ಚನ್ನಪಟ್ಟಣದಲ್ಲಿ ಅನಿತಾ ಕುಮಾರಸ್ವಾಮಿಗೆ ಟಿಕೆಟ್ ನೀಡುವಂತೆ ಕಾರ್ಯಕರ್ತರು ಒತ್ತಡ ಇತ್ತು. ಆದರೆ, ಪ್ರಜ್ವಲ್​ ವಿಷಯದ ಬಗ್ಗೆ ಶೀಘ್ರದಲ್ಲೇ ಒಂದು ಸ್ಪಷ್ಟನೆ ನೀಡುತ್ತೇವೆ ಎಂದು ತಿಳಿಸಿದರು.

ಕುಮಾರಸ್ವಾಮಿಗೆ ಸೋಲಿನ ಭಯವಿದೆ. ಹೀಗಾಗಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸ್ತಾರೆ ಎಂಬ ಜಗದೀಶ್​ ಶೆಟ್ಟರ್ ಹೇಳಿಕೆಗೆ ತಿರುಗೇಟು ನೀಡಿರುವ ಕುಮಾರಸ್ವಾಮಿ, ನನ್ನ ಕರ್ಮಭೂಮಿ ರಾಮನಗರ, ಹಾಗಾಗಿ ಅಲ್ಲಿಂದ ಸ್ಪರ್ಧಿಸುತ್ತೇನೆ. ಕಾರ್ಯಕರ್ತರ ಅಪೇಕ್ಷೆ ಮೇರೆಗೆ ಇನ್ನೊಂದು ಕ್ಷೇತ್ರದ ಆಯ್ಕೆ ಮಾಡಿಕೊಳ್ಳಲಾಗಿದೆ. ನನ್ನನ್ನು ಪ್ರಶ್ನಿಸುತ್ತಿರುವ ಇವರು, ಇದೇ ಪ್ರಶ್ನೆಯನ್ನ ಮೋದಿಯವರಿಗೂ ಕೇಳಿ ಎಂದು ಸವಾಲು ಹಾಕಿದರು.

ಸಿಎಂ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇನೆ.ಕುಮಾರಸ್ವಾಮಿಯನ್ನು ಸೋಲಿಸುವುದು ನನಗೆ ಗೊತ್ತು ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನವರು ಇರೋದೇ ನನಗೆ ವಿರೋಧ ಮಾಡಲು. ಸಿಎಂ ಸಿದ್ದರಾಮಯ್ಯ ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಅವರ ವಿರುದ್ಧ ಇಂದು ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇನೆ ಎಂದರು.

ನಿಮ್ಮಪ್ಪನಾಣೆಗೂ ನೀವು ಚಾಮುಂಡೇಶ್ವರಿಯಲ್ಲಿ ಆಯ್ಕೆಯಾಗ್ತೀರಾ?ಸಿಎಂ ಪದೇ ಪದೇ ಕುಮಾರಸ್ವಾಮಿ ಅವ್ರಪ್ಪನಾಣೆ ಸಿಎಂ ಆಗಲ್ಲ ಅಂತಾರೆ. ಆದರೆ, ನಿಮ್ಮಪ್ಪನಾಣೆ ನೀವು ಚಾಮುಂಡೇಶ್ಚರಿಯಿಂದ ಆಯ್ಕೆಯಾಗಿ ಬನ್ನಿ ನೋಡೋಣ ಎಂದು ಸಿಎಂಗೆ ಸವಾಲು ಹಾಕಿದರು. ಚಾಮುಂಡೇಶ್ವರಿ ಅಷ್ಟೇ ಅಲ್ಲ, ಬಾದಾಮಿಯಲ್ಲಾದರೂ ಸ್ಪರ್ಧಿಸಲಿ. ಅಲ್ಲಿಯೂ ನಾವು ಸಿಎಂ ವಿರುದ್ದ ಸ್ಪರ್ಧೆ ನೀಡಲು ಸಜ್ಜಾಗಿದ್ದೇವೆ ಎಂದರು.

Assembly election,H D Kumuraswami,Hubli

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ