ಬೆಂಗಳೂರು:ಏ-5: ವಿಧಾನಸಭಾ ಚುನಾವಣಾ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಬೇಕು. ರಾಜ್ಯ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿರುವುದಕ್ಕೆ ಕಡಿವಾಣ ಹಾಕಿ ಮುಕ್ತ, ನ್ಯಾಯಸಮ್ಮತ ಚುನಾವಣೆ ನಡೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯ ಚುನಾವಣಾ ಆಯಕ್ತ ಓ.ಪಿ ರಾವತ್ ಅವರಿಗೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಮನವಿ ಮಾಡಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಓಂ ಪ್ರಕಾಶ್ ರಾವತ್ ಅವರನ್ನು ಭೇಟಿ ಮಾಡಿದ ಹೆಚ್.ಡಿ. ದೇವೇಗೌಡ ರಾಜ್ಯದಲ್ಲಿನ ಪ್ರಸ್ತುತ ಪರಿಸ್ಥಿತಿ ಕುರಿತು, ಸರ್ಕಾರ ನಡೆಸುತ್ತಿರುವ ಚುನಾವಣಾ ಅಕ್ರಮ ಸಂಬಂಧ ಆರು ದೂರುಗಳನ್ನು ಸಲ್ಲಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡರು, ಭಾರತ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾವತ್ ಅವರನ್ನು ಮತ್ತು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇನೆ. ಸರ್ಕಾರದ ಕೆಲವು ಅಧಿಕಾರಿಗಳ ನಡವಳಿಕೆ ಬಗ್ಗೆ ಚುನಾವಣ ಆಯೋಗದ ಗಮನಕ್ಕೆ ತಂದಿದ್ದೇನೆ. ಚುನಾವಣಾ ಪ್ರಕ್ರಿಯೆ ಪಾರದರ್ಶಕವಾಗಿರಬೇಕು, ಆದರೆ ಈ ಬಗ್ಗೆ ನನಗೆ ಅನುಮಾನ ಇದೆ ಅಂಥ ಹೇಳಿರುವುದಾಗಿ ತಿಳಿಸಿದರು.
ಗೃಹ ಇಲಾಖೆಯಲ್ಲಿ ಕಾನೂನು ಸಡಿಲವಾಗಿದೆ. ನಿಷ್ಠಾವಂತ ಅಧಿಕಾರಿಗಳನ್ನು ಸರ್ಕಾರ ಬದಲಾವಣೆ ಮಾಡಿದೆ. ಸೂಪರ್ ಹೋಮ್ ಮಿನಿಸ್ಟರ್ ಅವರನ್ನು ಯಾವಾಗ ತೆಗೆದಿದೆ ಸರ್ಕಾರ? ಕೆಂಪಯ್ಯ ಅವರ ಆಫೀಸ್ ವಿಕಾಸಸೌಧದಿಂದ ತೆಗೆಯಲಾಗಿದೆ ಆದರೆ ಬೇರೆ ಕಡೆ ಅವರ ಆಫೀಸ್ ಶಿಫ್ಟ್ ಆಗಿದೆ ಇದರ ಬಗ್ಗೆ ಆಯೋಗದ ಗಮನಕ್ಕೆ ತರಲಾಗಿದೆ
ಎಂದು ಹೇಳಿದ್ದಾರೆ.
Chief Election Commissioner,Om Prakash Rawat,meet, H D Deve gowda