ಓವೈಸಿ ಪಕ್ಷದ ಜತೆ ಜೆಡಿಎಸ್ ಮೈತ್ರಿ ಬಗ್ಗೆ ಇನ್ನೂ ನಿರ್ಧರಿಸಿಲ್ಲ: ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ

ಹಾಸನ:ಮಾ-1: ಓವೈಸಿಯವರ ಎಐಎಂಐಎಂ ಪಕ್ಷದ ಜೊತೆ ಜೆಡಿಎಸ್ ಚುನಾವಣಾ ಪೂರ್ವ ಮೈತ್ರಿ ವಿಚಾರದ ಬಗ್ಗೆ ಯಾವುದೇ ‌ಖಚಿತ ಅಭಿಪ್ರಾಯಕ್ಕೆ ಬಂದಿಲ್ಲ, ಬಿಎಸ್ಪಿ, ಸಿಪಿಐಎಂ,ಎನ್ಸಿಪಿ ಜೊತೆ ಈಗಾಗಲೇ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ, ಆದರೆ ಯಾವುದೇ ಕಾರಣಕ್ಕೂ ಬಿಜೆಪಿ ಜತೆ ಮೈತ್ರಿಯಿಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ತಿಳಿಸಿದ್ದಾರೆ.

ಹಾಸನದಲ್ಲಿ ಮಾತನಾಡಿದ ಅವರು, ಓವೈಸಿ ಪಕ್ಷದ ಜೊತೆ ಜೆಡಿಎಸ್ ಚುನಾವಣಾ ಪೂರ್ವ ಮೈತ್ರಿ ವಿಚಾರದ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಮಾಡಿಲ್ಲ ಎಂದರು. ಮುಂದಿನ ಲೋಕಸಭೆ ಚುನಾವಣೆಯಲ್ಲೂ ಬಿಎಸ್ಪಿ ಜೊತೆ ಇರುತ್ತೇನೆ, ನನ್ನ ಜೀವನದ ಹೋರಾಟದ ಫಲವಾಗಿ ಈ ಬಾರಿ ಸರಕಾರ ರಚನೆ ಮಾಡಿಯೇ ತೀರುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಹಂ ನಿಂದ ಹೀಗೆ ಹೇಳುತ್ತಿಲ್ಲ, ದೈವದಬಲಪರೀಕ್ಷೆ ಇದೆ, ನನ್ನ ಮಗನನ್ನು ಸಿಎಂ ಮಾಡೋದಷ್ಟೇ ನನ್ನ ಉದ್ದೇಶ ಅಲ್ಲ, ಪ್ರಾದೇಶಿಕ ಪಕ್ಷ ಗಟ್ಟಿ ಯಾಗಬೇಕು ಎಂದು ಹೇಳಿದರು. ನಾನು ಯಾರ ಬಗ್ಗೆಯೂ ಭ್ರಷ್ಟಾಚಾರದ ಆರೋಪ ಮಾಡಿಲ್ಲ, ಚಿದಂಬರಂ ಪುತ್ರನ ಅರೆಸ್ಟ್ ಬಗ್ಗೆ ನಾನು ಮಾತನಾಡಲ್ಲ. ಇನ್ನು ಕಾವೇರಿಗಾಗಿ ೧೯೬೪ ರಿಂದ ಹೋರಾಟ ಮಾಡಿದ್ದೇನೆ, ಮುಂದೆಯೂ ಮಾಡುವೆ, ರಾಜ್ಯ ಸರಕಾರ ಏನು ಮಾಡುತ್ತೋ ನನಗೆ ಗೊತ್ತಿಲ್ಲ, ಆದರೆ ನಾನು ಲೋಕಸಭೆಯಲ್ಲಿ ಹೋರಾಟ ಮಾಡಲು ನಿರ್ಧರಿಸಿದ್ದೇನೆ, ನಮಗೆ ನೀರು ಉಳೀಬೇಕು, ನನ್ನ ಜನ ಉಳೀಬೇಕು ಎಂದು ಹೇಳಿದರು.

Karnataka polls,H. D. Deve Gowda,AIMIM,Asaduddin Owaisi

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ