ಚೀನಾಗೆ ಭೇಟಿ ನೀಡಿದ ಪ್ರಧಾನಿ : ಅನೌಪಚಾರಿಕ ಶೃಂಗದಲ್ಲಿ ಅಧ್ಯಕ್ಷ ಕ್ಸಿ ಜಿನ್ ಪಿಂಗ್-ಪ್ರಧಾನಿ ಮೋದಿ ಭೇಟಿ: ಕುತೂಹಲ ಮೂಡಿಸಿದೆ ಉಭಯ ನಾಯಕರ ಮಾತುಕತೆ

ಬೀಜಿಂಗ್‌:ಏ-27: ಚೀನಾದ ವುಹಾನ್‌ ನಗರದಲ್ಲಿ ಇಂದಿನಿಂದ ಎರಡು ದಿನ ನಡೆಯಲಿರುವ ಅನೌಪಚಾರಿಕ ಶೃಂಗಸಭೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾಗೆ ಆಗಮಿಸಿದ್ದಾರೆ.

ಅನೌಪಚಾರಿಕ ಶೃಂಗ ಸಭೆಯಲ್ಲಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರು ಮಾತುಕತೆ ನಡೆಸಲಿದ್ದು, ಉಭಯ ನಾಯಕರ ಭೇಟಿಯಿಂದ ಎರಡು ರಾಷ್ಟ್ರಗಳ ಬಾಂಧವ್ಯದ ಬಗೆಗಿನ ಪ್ರಾಮಾಣಿಕ ಚರ್ಚೆಯ ಆರಂಭ ಆಗಬಹುದು ಎಂದು ವ್ಯಾಖ್ಯಾನಿಸಲಾಗಿದೆ.

ಭಿನ್ನಾಭಿಪ್ರಾಯ ಹಾಗೂ ಬಿಕ್ಕಟ್ಟುಗಳಿಂದಾಗಿ ಕುಸಿದಿರುವ ಎರಡು ದೇಶಗಳ ಬಾಂಧವ್ಯಕ್ಕೆ ಹೊಸ ಚೈತನ್ಯ ತುಂಬಲು ಇಬ್ಬರೂ ನಾಯಕರು ಪ್ರಯತ್ನ ನಡೆಸಲಿದ್ದಾರೆ.

ಭೇಟಿ ವೇಳೆ ಯಾವುದೇ ಒಪ್ಪಂದಗಳಿಗೆ ಸಹಿ ಹಾಕುವುದಿಲ್ಲ ಎಂದು ಎರಡೂ ರಾಷ್ಟ್ರಗಳು ಈಗಾಗಲೇ ಹೇಳಿವೆ. ಭವಿಷ್ಯದ ದೃಷ್ಟಿಯಿಂದ ಪರಸ್ಪರ ಅರ್ಥೈಸಿಕೊಳ್ಳುವ ಪ್ರಕ್ರಿಯೆಯ ಭಾಗ ಇದು ಎಂದು ಸ್ಪಷ್ಟಪಡಿಸಿವೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವಣ ಅನೌಪಚಾರಿಕ ಮಾತುಕತೆಯು ಚೀನಾ–ಭಾರತ ಬಾಂಧವ್ಯದ ಬಗೆಗಿನ ಪ್ರಾಮಾಣಿಕ ಚರ್ಚೆಯ ಆರಂಭ ಆಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪರಮಾಣು ಪೂರೈಕೆದಾರರ ಗುಂಪಿಗೆ ಸೇರುವ ಭಾರತದ ಪ್ರಯತ್ನಕ್ಕೆ ಸಂಬಂಧಿಸಿದಂತೆ ಚೀನಾ ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಇಲ್ಲ ಎಂದು ಸೆಂಟರ್ ಫಾರ್ ಸ್ಟ್ರಾಟಜಿಕ್ ಅಂಡ್ ಇಂಟರ್‌ನ್ಯಾಷನಲ್ ಸ್ಟಡೀಸ್‌ನ (ಸಿಎಸ್ಐಎಸ್) ಚೀನಾ ಪವರ್ ಪ್ರಾಜೆಕ್ಟ್ ನಿರ್ದೇಶಕ ಬಾನ್ನಿ ಎಸ್. ಗ್ಲೇಸರ್ ಹೇಳಿದ್ದಾರೆ.

ಅಂತೆಯೇ, ಕ್ಸಿ ಅವರು ತೀವ್ರ ಆಸಕ್ತಿ ವಹಿಸಿರುವ ಒಂದು ವಲಯ ಒಂದು ರಸ್ತೆ ಯೋಜನೆಯ ಬಗೆಗೂ ಭಾರತ ತನ್ನ ನಿರ್ಧಾರವನ್ನು ಬದಲಿಸುವ ಸಾಧ್ಯತೆ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ತನ್ನ ಹಿತಕ್ಕೆ ಧಕ್ಕೆಯಾಗುವ ಉಚಿತ ಮತ್ತು ಮುಕ್ತ ಇಂಡೋ ಪೆಸಿಫಿಕ್ ಕಾರ್ಯಯೋಜನೆಯಲ್ಲಿ ಪಾಲ್ಗೊಳ್ಳದಂತೆ ಭಾರತಕ್ಕೆ ಚೀನಾ ಎಚ್ಚರಿಸಬಹುದು ಎನ್ನಲಾಗಿದೆ.ತೊಡಕಾಗಿದೆ.

ಆರ್ಥಿಕ ಸಹಕಾರವನ್ನು ವಿಸ್ತರಿಸುವ ಹಲವು ಮಾರ್ಗಗಳು ಭಾರತ–ಚೀನಾಕ್ಕೆ ಇದ್ದು, ಗಡಿಯ ಹಾಗೂ ಇತರ ಅಂಶಗಳ ಕುರಿತಾದ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳುವುದು ಇದಕ್ಕೆ ಸಹಕಾರಿ ಆಗಬಹುದು ಎಂದು ಸಿಎಸ್ಐಎಸ್‌ನಲ್ಲಿನ ಚೀನಾ ವ್ಯವಹಾರ ಮತ್ತು ರಾಜಕೀಯ ಆರ್ಥಿಕತೆ ವಿಭಾಗದ ನಿರ್ದೇಶಕ ಸ್ಕಾಟ್ ಕೆನಡಿ ಹೇಳಿದ್ದಾರೆ.

PM Modi-Xi Jinping,Meet,two-day informal summit

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ