ಚುನಾವಣಾ ಆಯೋಗದ ಮುಖ್ಯ ಆಯುಕ್ತರಾಗಿ ಸುನೀಲ್ ಅರೋರಾ ಅಧಿಕಾರ ಸ್ವೀಕಾರ

ನವದೆಹಲಿ: ಭಾರತೀಯ ಚುನಾವಣಾ ಆಯೋಗದ 23ನೇ ಮುಖ್ಯ ಆಯುಕ್ತರಾಗಿ ಸುನೀಲ್ ಅರೋರಾ ಇಂದು ಅಧಿಕಾರ ಸ್ವೀಕರಿಸಿದ್ದಾರೆ.

ಓ. ಪಿ. ರಾವತ್ ಅವರ ಅಧಿಕಾರ ಅವಧಿ ನಿನ್ನೆಗೆ ಮುಕ್ತಾಯಗೊಂಡಿದ್ದರಿಂದ ಅವರ ಸ್ಥಾನಕ್ಕೆ ಸುನೀಲ್ ಅರೋರಾ ಅವರನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇಮಕ ಮಾಡಿದ್ದರು.

ಅಧಿಕಾರ ಸ್ವೀಕರಿಸಿ ಮಾತನಾಡಿದ ಸುನೀಲ್ ಅರೋರಾ, ಸಂವಿಧಾನದ ಆಶಯಕ್ಕೆ ತಕ್ಕಂತೆ ಎಲ್ಲರ ನಿರೀಕ್ಷೆಗಳಿಗೆ ತಕ್ಕಂತೆ ಚುನಾವಣಾ ಆಯೋಗದಲ್ಲಿನ ಎಲ್ಲಾ ಸಿಬ್ಬಂದಿಗಳೊದಗೂಡಿ ಕಾರ್ಯನಿರ್ವಹಿಸುವುದಾಗಿ ಹೇಳಿದ್ದಾರೆ.

ಇದೇವೇಳೆ 2019ರ ಲೋಕಸಭಾ ಚುನಾವಣೆಗಾಗಿ ಈಗಾಗಲೇ ಆಂತರಿಕ ಸಿದ್ಧತೆಗಳನ್ನು ಆಯೋಗ ಆರಂಭಿಸಿದ್ದು, ಮುಕ್ತ ನ್ಯಾಯಸಮ್ಮತ ಚುನಾವಣೆ ನಡೆಸಲಾಗುವುದು, ನಮ್ಮ ಸೈನಿಕರು ಹಾಗೂ ದಿವ್ಯಾಂಗರು ತಮ್ಮ ಹಕ್ಕು ಚಲಾಯಿಸುವಂತೆ ಮಾಡುವುದಾಗಿ ಅರೋರಾ ಹೇಳಿದ್ದಾರೆ.

ಅರೋರಾ ಅವರಿಗೆ 2019ರ ಲೋಕಸಭಾ ಚುನಾವಣೆ ಪ್ರಮುಖ ಸವಾಲಾಗಿದೆ.ಇದಲ್ಲದೇ ಮುಂದಿನ ವರ್ಷವೇ ನಡೆಯಲಿರುವ ಜಮ್ಮು-ಕಾಶ್ಮೀರ, ಓಡಿಶಾ, ಮಹಾರಾಷ್ಟ್ರ, ಹರ್ಯಾಣ, ಆಂಧ್ರಪ್ರದೇಶ, ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ರಾಜ್ಯಗಳ ಚುನಾವಣೆಯೂ ಪ್ರಮುಖ ಜವಾಬ್ದಾರಿಯಾಗಿದೆ.

62 ವರ್ಷದ ಅರೊರಾ ಕೌಶಲ್ಯಾಭಿವೃದ್ದಿ ಸಚಿವಾಲಯ ಹಾಗೂ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. 1980ರ ರಾಜಸ್ತಾನ ಕೇಡರ್ ನ ಐಎಎಸ್ ಅಧಿಕಾರಿಯಾಗಿರುವ ಅರೊರಾ, ಹಣಕಾಸು, ಯೋಜನಾ ಆಯೋಗ, ಜವಳಿ ಮತ್ತಿತರ ಸಚಿವಾಲಯಗಳಲ್ಲಿ ಕಾರ್ಯನಿರ್ವಹಿಸಿದ್ದರು.

Sunil Arora,Chief Election Commissioner

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ