ನವದೆಹಲಿ:ಮಾ-17: ಬಿಜೆಪಿ ವಿಭಜನೆಯ ರಾಜಕೀಯ ಮಾಡುತ್ತಿದ್ದು, ದೇಶವನ್ನು ಒಡೆಯುವ ಹುನ್ನಾರ ನಡೆಸುತ್ತಿದೆ. ಆದರೆ ಕಾಂಗ್ರೆಸ್ ದೇಶವನ್ನು ಒಗ್ಗೂಡಿಸಿ, ಮುನ್ನಡೆಸುವ ಯತ್ನ ಮಾಡುತ್ತಿದೆ.ದೇಶವನ್ನು ಒಗ್ಗಟ್ಟಿನಿಂದ ಮುನ್ನಡೆಸುವ ಸಾಮರ್ಥ್ಯ ಕಾಂಗ್ರೆಸ್ ಗೆ ಮಾತ್ರ ಇದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಿಳಿಸಿದ್ದಾರೆ.
ದೆಹಲಿಯ ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಕ್ಷದ 84ನೇ ಸರ್ವಸದಸ್ಯ ಸಭೆಯ ಎರಡನೇ ದಿನ ಮಾತನಾಡಿದ ಅವರು, ದೇಶ ಸಣ್ಣ ಸಣ್ಣ ವಿಷಯಗಳಿಗೆ ಸಂಬಂಧಪಟ್ಟಂತೆ ಇಬ್ಭಾಗವಾಗುತ್ತಿದೆ. ಎಲ್ಲಾ ಗುರುತುಗಳು ಬೆದರಿಕೆಗೆ ಒಳಗಾಗುತ್ತಿವೆ. ಬಿಜೆಪಿಯವರು ಸಿಟ್ಟು, ಆಕ್ರೋಶಗಳನ್ನು ಬೆಳೆಸುತ್ತಿದ್ದಾರೆ. ಜಾತಿ, ಧರ್ಮಗಳಗಳ ನಡುವೆ ವ್ಯತ್ಯಾಸಗಳನ್ನು ತಂದು ವಿಭಜನೆಯ ರಾಜಕೀಯ ನಡೆಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಎಂದಿಗೂ ಪ್ರೀತಿಯನ್ನು ಬೆಳೆಸುತ್ತದೆ. ಯಾವುದೇ ಜಾತಿ, ಧರ್ಮವನ್ನು ನೋಡದೆ ದೇಶವನ್ನು ಮುನ್ನಡೆಸುವ ಬಗ್ಗೆ ಸಾಮರ್ಥ್ಯವನ್ನು ಕೇವಲ ಕಾಂಗ್ರೆಸ್ ಪಕ್ಷ ಮಾತ್ರ ಹೊಂದಿದೆ.
ದೇಶದಲ್ಲಿನ ನಿರುದ್ಯೋಗ, ರೈತರ ಸಂಕಟದಂತಹ ಪ್ರಮುಖ ವಿಚಾರಗಳ ಕಡೆಗೆ ಬಿಜೆಪಿ ಗಮನಹರಿಸುತ್ತಿಲ್ಲ. ದೇಶದಲ್ಲಿ ಜನ ಅಸಂತೃಪ್ತಿ, ಆಕ್ರೋಶದಿಂದ ಇದ್ದಾರೆ. ಹೊಸ ದಾರಿಗಾಗಿ ಎದುರು ನೋಡುತ್ತಿದ್ದಾರೆ. ಈ ಸಂದರ್ಭದಲ್ಲಿ ನಾನು ಒಂದು ವಿಷಯ ಹೇಳಬಯಸುತ್ತೇನೆ ಅದೆಂದರೆ ಈ ದೇಶ ಪ್ರತಿಯೊಬ್ಬರಿಗೂ ಸೇರಿರುವುದಾಗಿದ್ದು ಕಾಂಗ್ರೆಸ್ ಏನು ಮಾಡುವುದಿದ್ದರೂ ದೇಶದ ಜನತೆಯ ಒಳಿತಿಗಾಗಿ ಮಾಡುತ್ತದೆ ಎಂದು ಪ್ರತಿಪಾದಿಸಿದರು. ದೇಶಕ್ಕೆ ಕಾಂಗ್ರೆಸ್ ಹೊಸ ಮಾರ್ಗ ತೋರಲಿದೆ. ಕಾಂಗ್ರೆಸ್ ಮತ್ತು ಪ್ರತಿಪಕ್ಷ (ಬಿಜೆಪಿ)ಕ್ಕೆ ಇರುವ ವ್ಯತ್ಯಾಸ ಎಂದರೆ, ಅವರು ಕೋಪ ಬಳಸಿದರೆ, ನಾವು ಸಂಗಡಿಗರ ಮೇಲೆ ಪ್ರೀತಿ ತೋರುತ್ತೇವೆ. ನಾವು ಪ್ರೀತಿಯಿಂದ ಕೆಲಸ ಮಾಡುತ್ತಿದ್ದೇವೆ. ದೇಶವನ್ನು ಒಗ್ಗೂಡಿಸಿ ಮುಂದೆ ನಡೆಸುವುದು ಹಸ್ತ ಚಿಹ್ನೆ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್, ಕಾಂಗ್ರೆ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು, ಕಾಂಗ್ರೆಸ್ ಅಧ್ಯಕ್ಷರುಗಳು ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ಮುಖಂಡರು ಸಮಾವೇಶದಲ್ಲಿ ಭಾಗವಹಿಸಿದ್ದಾರೆ.
Rahul gandhi,AICC plenary session, Congress