ಸಂಸತ್ ಗದ್ದಲ-ಕೋಲಾಹಲ: ಮಂಡನೆಯಾಗದ ಅವಿಶ್ವಾಸ ನಿರ್ಣಯ; ಕಲಾಪ ಮುಂದೂಡಿಕೆ

ನವದೆಹಲಿ:ಮಾ-16: ಪಂಜಾಬ್‌ ನ್ಯಾಷನಲ್ ಬ್ಯಾಂಕ್ ಹಗರಣ, ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಸೇರಿದಂತೆ ಹಲವು ವಿಷಯಗಳು ಇಂದು ಸಂಸತ್ ಕಲಾಪದಲ್ಲಿ ಪ್ರತಿಧ್ವನಿಸಿದ್ದು, ಸತತ ಹತ್ತನೇ ದಿನವೂ ಲೋಕಸಭೆ ಕಲಾಪ ಗದ್ದಲಕ್ಕೆ ಬಲಿಯಾಗಿದೆ. ವಿಪಕ್ಷಗಳ ಸದಸ್ಯರ ಗದ್ದಲ-ಕೋಲಾಹಲದಿಂದಾಗಿ ಲೋಕಸಭೆ ಕಲಾಪವನ್ನು ಸೋಮವಾರದವರೆಗೆ ಮುಂದೂಡಲಾಯಿತು.

ಪ್ರಶ್ನೋತ್ತರ ಕಲಾಪ ಪ್ರಾರಂಭಿಸುವ ವೇಳೆ ವಿಪಕ್ಷ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸತೊಡಗಿದರು. ಲೋಕಸಭೆಯಲ್ಲಿ ಗದ್ದಲವುಂಟಾದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವೈಎಸ್‌ಆರ್ ಕಾಂಗ್ರೆಸ್ ಮತ್ತು ಟಿಡಿಪಿ ಮಂಡಿಸಲು ಉದ್ದೇಶಿಸಿದ್ದ ಅವಿಶ್ವಾಸ ಗೊತ್ತುವಳಿ ಮಂಡನೆಯಾಗಲಿಲ್ಲ. ಅವಿಶ್ವಾಸ ನಿರ್ಣಯ ಪ್ರತಿ ತಲುಪಿದೆ, ಆದರೆ ಸದನದಲ್ಲಿ ಕಲಾಪ ಕ್ರಮದ್ಧವಾಗಿರದ ಕಾರಣ ಅವಿಶ್ವಾಸ ಗೊತ್ತುವಳಿಯ ಪ್ರತಿಯನ್ನು ಮಂಡಿಸಲಾಗುತ್ತಿಲ್ಲ ಎಂದು ಲೋಕಸಭೆಯ ಸ್ಪೀಕರ್ ಸುಮಿತ್ರಾ ಮಹಾಜನ್ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಅವಕಾಶ ನೀಡುವಂತೆ ವೈಎಸ್‌ಆರ್ ಕಾಂಗ್ರೆಸ್ ಪಕ್ಷವು ಗುರುವಾರ ಲೋಕಸಭೆಯಲ್ಲಿ ನೋಟಿಸ್ ನೀಡಿತ್ತು. ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಷಯಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರದ ಜತೆ ಮುನಿಸಿಕೊಂಡು ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದಿರುವ ಟಿಡಿಪಿ ಸಹ ಅವಿಶ್ವಾಸ ಗೊತ್ತುವಳಿಗೆ ಬೆಂಬಲ ಸೂಚಿಸಿದೆ.

ಈ ನಡುವೆ ಅವಿಶ್ವಾಸ ಗೊತ್ತುವಳಿಗೆ ಬೆಂಬಲ ನೀಡುವುದಾಗಿ ಪ್ರತಿಪಕ್ಷಗಳಾದ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಸಿಪಿಐ(ಎಂ) ಹೇಳಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ