ಬೆಂಗಳೂರು, ಮಾ.14- ಚುನಾವಣಾ ಪ್ರಣಾಳಿಕೆಗಾಗಿ ಬಿಜೆಪಿ ವಿಶಿಷ್ಟ ಪ್ರಯತ್ನ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸಭೆಗಳನ್ನು ನಡೆಸಲಾಗುತ್ತಿದೆ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.
ನಗರದ ಖಾಸಗಿ ಹೊಟೇಲ್ನಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಎಸ್ಸಿ ಮೋರ್ಚಾ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಣಾಳಿಕೆ ತಯಾರಿಕೆಗಾಗಿ 50 ವಿವಿಧ ಕ್ಷೇತ್ರಗಳನ್ನು ಗುರುತು ಮಾಡಿ ಜನಾಭಿಪ್ರಾಯ ಸಂಗ್ರಹಿಸುತ್ತಿದ್ದೇವೆ. ನಮ್ಮ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ. ಈ ಹಿನ್ನೆಲೆಯಲ್ಲಿ ಪ್ರಯತ್ನ ಈಗಾಗಲೇ ಆರಂಭವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸರ್ಕಾರದಲ್ಲಿ ದಲಿತರನಿಗೆ ನೀಡಿದ ಯೋಜನೆಗಳು ಆ ವರ್ಗದವರಿಗೆ ಸರಿಯಾಗಿ ತಲುಪಿಲ್ಲ. ಹಾಗಾಗಿ ದಲಿತ ವರ್ಗಕ್ಕೆ ನಿರ್ದಿಷ್ಟ ಕಾರ್ಯಕ್ರಮ ರೂಪಿಸುವ ಅಗತ್ಯವಿದೆ. ಇಂದಿರಾಗಾಂಧಿ ಅವರ ಕಾಲದಲ್ಲಿ ದೆಹಲಿಯಿಂದ ಒಂದು ರೂ. ಕಳುಹಿಸಿದರೆ ಬೆಂಗಳೂರಿಗೆ ತಲುಪುವಷ್ಟರಲ್ಲಿ ಅದು ಕೇವಲ 15 ಪೈಸೆಯಾಗುತ್ತಿತ್ತು. ಆದರೆ, ಈಗ ಕಾಲ ಬದಲಾಗಿದೆ. ಇದು ಮೋದಿ ಕಾಲ ಎಂದು ಬಣ್ಣಿಸಿದರು.
ಇಡೀ ರಾಜ್ಯದಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ಲಬೇಕೆಂದರೆ ದಲಿತ ಮತಗಳಿಂದ ಮಾತ್ರ ಸಾಧ್ಯ. ಅಂದಿನ ಯಡಿಯೂರಪ್ಪ ಅವರ ಸಂಪುಟದಲ್ಲಿ 13 ಜನ ದಲಿತರು ಇದ್ದರು. ಬಿಜೆಪಿ ದಲಿತರಿಗೆ ಪ್ರಾಮುಖ್ಯತೆ ನೀಡುತ್ತದೆ ಎನ್ನುವುದಕ್ಕೆ ಅದೇ ಸಾಕ್ಷಿ ಎಂದರು.
ಪ್ರಣಾಳಿಕೆ ತಯಾರಿಕೆ ಸಂಬಂಧ ಯಾವುದೇ ಉಪಯುಕ್ತ ಸಲಹೆ ಬಂದರೆ ನಿಶ್ಚಿತವಾಗಿ ಅದರಲ್ಲಿ ಸೇರ್ಪಡೆಗೊಳಿಸುತ್ತೇವೆ. ಇದರಲ್ಲಿ ಅನುಮಾನ ಬೇಡ ಎಂದು ಹೇಳಿದರು.