ಬೆಂಗಳೂರು, ಮಾ.14-ಚುನಾವಣಾ ಕಾರ್ಯ ನಿಮಿತ್ತ ಕೆಸಿಎಸ್ಆರ್ ನಿಯಮ 32ರಡಿ ಒಟ್ಟು 71 ಅಧಿಕಾರಿಗಳಿಗೆ ಬಿಬಿಎಂಪಿಯಲ್ಲಿ ಮುಂಬಡ್ತಿ ನೀಡಲಾಗಿದ್ದು, ಆಯುಕ್ತರ ಈ ನಿರ್ಧಾರ ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ.
ಚುನಾವಣಾ ಕರ್ತವ್ಯದಲ್ಲಿ ಪ್ರಮುಖ ಪಾತ್ರ ವಹಿಸುವವರು ಕಂದಾಯ ಇಲಾಖೆ ಅಧಿಕಾರಿಗಳು. ಈ ಇಲಾಖೆಯಲ್ಲಿ ಅನೇಕ ಹುದ್ದೆಗಳು ಖಾಲಿ ಇದ್ದವು. ಹಾಗಾಗಿ ಪಾಲಿಕೆ ಆಯುಕ್ತ ಮಂಜುನಾಥ್ಪ್ರಸಾದ್ ಅವರು ಕೆಸಿಎಸ್ಆರ್ ನಿಯಮದನ್ವಯ ಎಂಟು ನೌಕರರನ್ನು ಕಂದಾಯಾಧಿಕಾರಿಗಳಾಗಿ, 13 ಮಂದಿಯನ್ನು ಡಿಆರ್ಒಗಳಾಗಿ, 50 ಮಂದಿಗೆ ಎಆರ್ಒಗಳಾಗಿ ಒಟ್ಟು 71 ಮಂದಿಗೆ ಮುಂಬಡ್ತಿ ನೀಡಿ ಆದೇಶ ಹೊರಡಿಸಿದ್ದಾರೆ.
ಆಯುಕ್ತರ ಈ ನಿರ್ಧಾರ ಸರ್ಕಾರಿ ನಿಯಮಾವಳಿಗೆ ವಿರುದ್ಧವಾಗಿದ್ದು, ಸೇವಾ ಹಿರಿತನವನ್ನು ಕಡೆಗಣಿಸಲಾಗಿದೆ ಎಂದು ಅನ್ಯಾಯಕ್ಕೊಳಗಾಗಿರುವ ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೊನ್ನೆ ನಡೆದ ಪಾಲಿಕೆ ಸಭೆಯಲ್ಲಿ ಖಾಲಿ ಇದ್ದ ಹುದ್ದೆಗಳಿಗೆ ಬಡ್ತಿ ನೀಡಬೇಕಾದರೆ ಸರ್ಕಾರದ ಡಿಪಿಎಆರ್ ಮಾರ್ಗಸೂಚಿಯಂತೆ ಬಡ್ತಿ ನೀಡಬೇಕು. ಸೇವಾ ಹಿರಿತನಕ್ಕೆ ಆದ್ಯತೆ ನೀಡಬೇಕು, ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳಬೇಕೆಂದು ಮೇಯರ್ ಸಂಪತ್ರಾಜ್ ಹಾಗೂ ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್ ಆಯುಕ್ತರಿಗೆ ಸೂಚಿಸಿದ್ದರು. ಈ ಸೂಚನೆಗೆ ಆಯುಕ್ತರು ಒಪ್ಪಿದ್ದರು.
ಆದರೆ ಕೊಟ್ಟ ಮಾತಿನಂತೆ ನಡೆಯದೆ ಆಯುಕ್ತ ಮಂಜುನಾಥ್ ಪ್ರಸಾದ್ ಸರ್ಕಾರದ ಗಮನಕ್ಕೂ ತಾರದೆ ನಿಯಮಾವಳಿಗಳನ್ನು ಗಾಳಿಗೆ ತೂರದೆ 71 ಹುದ್ದೆಗಳಿಗೆ ಚುನಾವಣಾ ಕಾರ್ಯ ನೆಪವೊಡ್ಡಿ ಮುಂಬಡ್ತಿ ನೀಡಿದ್ದಾರೆ.
ಎಆರ್ಒ ಹುದ್ದೆ 40 ಖಾಲಿ ಇತ್ತು ಆದರೆ ಆಯುಕ್ತರು 50ಮಂದಿಗೆ ಈ ಹುದ್ದೆಗೆ ಮುಂಬಡ್ತಿ ನೀಡಿದ್ದಾರೆ. 10 ಎಆರ್ಒಗಳಿಗೆ ಡಿಆರ್ಒ ಆಗಿ ಮುಂಬಡ್ತಿ ನೀಡಿದ್ದಾರೆ. ಚುನಾವಣಾ ಕಾರ್ಯದಲ್ಲಿ ನಿರತರಾಗಿರುವವರಿಗೆ ತೊಂದರೆ ಕೊಡಬಾರದೆಂದು ಗೊತ್ತಿದ್ದರೂ ಕೂಡ ಯಾರೋ ಕೆಲವರನ್ನು ಓಲೈಸಲು ತರಾತುರಿಯಲ್ಲಿ 71 ಮಂದಿಗೆ ಬಡ್ತಿ ನೀಡಿರುವುದು ನೌಕರರ ವರ್ಗದ ಕೆಂಗಣ್ಣಿಗೆ ಗುರಿಯಾಗುವಂತಾಗಿದೆ.
ಮುಂಬಡ್ತಿ ವಿಚಾರ ಕೋರ್ಟ್ನಲ್ಲಿದ್ದು, ನಿಯಮ 32ರ ಪ್ರಕಾರವೂ ಮುಂಬಡ್ತಿ ಮಾಡಬಾರದೆಂದು ತಡೆಯಾಜ್ಞೆ ಇದ್ದರೂ ಆಯುಕ್ತರು ಮುಂಬಡ್ತಿ ನೀಡಿರುವುದು ಸಂಘರ್ಷಕ್ಕೆ ಎಡೆಮಾಡಿದೆ.