ಮೇಯರ್ ಸಂಪತ್‍ರಾಜ್ ರಿಂದ ಬಿಬಿಎಂಪಿ ಇತಿಹಾಸದಲ್ಲೇ ಅತ್ಯಧಿಕ ಸಭೆ

ಬೆಂಗಳೂರು, ಜು.28- ಬಿಬಿಎಂಪಿ ಇತಿಹಾಸದಲ್ಲೇ ಅತ್ಯಧಿಕ ಸಭೆ ನಡೆಸುವ ಮೂಲಕ ಇತಿಹಾಸ ನಿರ್ಮಿಸಲು ಮುಂದಾಗಿದ್ದಾರೆ ಮೇಯರ್ ಸಂಪತ್‍ರಾಜ್.
ಕಳೆದ 2017 ಸೆಪ್ಟೆಂಬರ್‍ನಲ್ಲಿ ಮೇಯರ್ ಆಗಿ ಅಧಿಕಾರ ವಹಿಸಿಕೊಂಡ ನಂತರ ಇದುವರೆಗೂ ಮಾಸಿಕ, ವಿಷಯಾಧಾರಿತ ಹಾಗೂ 32 ವಿಶೇಷ ಸಭೆಗಳನ್ನು ನಡೆಸಿರುವ ಮೇಯರ್ ಅವರು ಇಂದು ಬಿಎಂಟಿಸಿ ಮತ್ತು ಕೊಳಚೆ ನಿರ್ಮೂಲನಾ ಮಂಡಳಿ ವಿಷಯಗಳ ಕುರಿತಂತೆ ವಿಶೇಷ ಸಭೆ ನಡೆಸುತ್ತಿದ್ದಾರೆ. ಆದೇ ರೀತಿ ಇದೇ 31ರಂದು ವಿಷಯಾಧಾರಿತ ಸಭೆ ನಡೆಸಲು ತೀರ್ಮಾನಿಸಿದ್ದಾರೆ.

ಮೇಯರ್ ಸಂಪತ್‍ರಾಜ್ ಅವರ ಅವಧಿ ಸೆಪ್ಟೆಂಬರ್ ಅಂತ್ಯಕ್ಕೆ ಕೊನೆಗೊಳ್ಳುವುದರಿಂದ ಆಗಸ್ಟ್ ತಿಂಗಳಿನಲ್ಲಿ ಸರಾಸರಿ 10 ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಪಾಲಿಕೆಯ ಉನ್ನತ ಮೂಲಗಳು ತಿಳಿಸಿವೆ.

ಆಗಸ್ಟ್‍ನಲ್ಲಿ 10 ಸಭೆ ನಡೆಸಿದರೆ ಒಟ್ಟಾರೆ ಮೇಯರ್ ಸಂಪತ್‍ರಾಜ್ ಅವರು 44 ಸಭೆ ನಡೆಸಿದಂತಾಗುತ್ತದೆ. ಸೆಪ್ಟೆಂಬರ್‍ನಲ್ಲಿ ಒಂದು ಮಾಸಿಕ ಸಭೆ ಹಾಗೂ ಹೊಸ ಮೇಯರ್ ಆಯ್ಕೆ ಸಭೆ ನಡೆದರೆ ಒಟ್ಟಾರೆ ಈ ವರ್ಷದಲ್ಲಿ 46 ಸಭೆ ನಡೆದಂತಾಗುತ್ತದೆ. ಬಿಬಿಎಂಪಿ ರಚನೆಯಾದ ನಂತರ ಇದುವರೆಗೂ ಯಾವೊಬ್ಬ ಮಹಾಪೌರರೂ 46 ಸಭೆ ನಡೆಸಿದ ಉದಾಹರಣೆಗಳೇ ಇಲ್ಲ.

ಯಾರೇ ಮೇಯರ್ ಆದರೂ ಪ್ರತಿ ತಿಂಗಳು ಒಂದು ಮಾಸಿಕ ಹಾಗೂ ಒಂದು ವಿಷಯಾಧಾರಿತ ಸಭೆ ನಡೆಸುತ್ತಾರೆ. ಕೆಲವು ಸಂದರ್ಭಗಳಲ್ಲಿ ಚುಕ್ಕೆ ಗುರುತಿನ ಪ್ರಶ್ನೆಗಳಿಗಾಗಿ ವಿಶೇಷ ಸಭೆಗಳನ್ನು ನಡೆಸಿರುವ ಇತಿಹಾಸವಿದೆ.

ಕೆಲ ಮಹಾಪೌರರು ಸಾರ್ವಜನಿಕ ಸಮಸ್ಯೆ ಕುರಿತಂತೆ ಚರ್ಚಿಸಲು ವಿಶೇಷ ಸಭೆ ಕರೆದಿದ್ದರೂ ಇದುವರೆಗೂ ಯಾವೊಬ್ಬ ಮೇಯರ್ ಕೂಡ 30 ಸಭೆಗಳನ್ನು ನಡೆಸಿದ ಉದಾಹರಣೆಗಳೇ ಇಲ್ಲ.

ಬಿಬಿಎಂಪಿ ರಚನೆಗೂ ಮುನ್ನ ಇದ್ದ ಬೆಂಗಳೂರು ಮಹಾನಗರ ಪಾಲಿಕೆಯಲ್ಲೂ ಈ ಮಟ್ಟದ ಸಭೆ ನಡೆಸಿರುವ ಬಗ್ಗೆ ಯಾವುದೇ ಮಾಹಿತಿಗಳು ಇಲ್ಲ.
ಆದರೆ, ಈ ಬಾರಿ ದಾಖಲೆ ಬರೆಯಲು ಮುಂದಾಗಿರುವ ಸಂಪತ್‍ರಾಜ್ ಅವರು ತಮ್ಮ ಅವಧಿ ಪೂರ್ಣಗೊಳ್ಳಲು ಎರಡು ತಿಂಗಳು ಬಾಕಿ ಇರುವ ಮುನ್ನವೇ 34 ಸಭೆಗಳನ್ನು ನಡೆಸಿದ್ದಾರೆ.

ಉಳಿದ ಎರಡು ತಿಂಗಳ ಅವಧಿಯಲ್ಲೂ ಅವರು ಮತ್ತಷ್ಟು ಸಭೆಗಳನ್ನು ನಡೆಸುವ ಮೂಲಕ ಇತಿಹಾಸ ನಿರ್ಮಿಸಲು ಮುಂದಾಗಿದ್ದಾರೆ. ಅವರು ನಡೆಸಿದ ಸಭೆಗಳು ಕೇವಲ ಇತಿಹಾಸ ಸೇರದೆ ಸಮಸ್ಯೆಯಿಂದ ಬಳಲುತ್ತಿರುವ ಸಾರ್ವಜನಿಕರಿಗೆ ನೆರವಾಗುವಂತಾಗಲಿ.

BBMP,Mayor sampath raj

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ