ರವಿಕೃಷ್ಣರೆಡ್ಡಿ -ಮಾಜಿ ಮೇಯರ್ ಮಂಜುನಾಥ್‍ರೆಡ್ಡಿ ನಡುವೆ ಮಾತಿನ ಚಕಮಕಿ

ಬೆಂಗಳೂರು, ಮಾ.14-ಬಿಪಿಎಲ್ ಕಾರ್ಡ್ ಹಂಚಿಕೆ ವಿಚಾರದಲ್ಲಿ ಮಾಜಿ ಮೇಯರ್ ಮಂಜುನಾಥ್‍ರೆಡ್ಡಿ ಹಾಗೂ ಸಾಮಾಜಿಕ ಕಾರ್ಯಕರ್ತ ರವಿಕೃಷ್ಣರೆಡ್ಡಿ ಅವರೊಂದಿಗೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋದ ಘಟನೆ ನಡೆಯಿತು.

ಗೃಹ ಸಚಿವರ ಸ್ವಕ್ಷೇತ್ರ ಬಿಟಿಎಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಾವರೆಕೆರೆಯಲ್ಲಿ ಇಂದು ಬಿಪಿಎಲ್ ಕಾರ್ಡ್ ಕೊಡಿಸಲಾಗುತ್ತದೆ ಎಂಬ ಸುದ್ದಿ ಹರಡಿತ್ತು. ಹಾಗಾಗಿ ಬಿಪಿಎಲ್ ಕಾರ್ಡ್ ಪಡೆಯಲು ನೂರಾರು ಮಂದಿ ಆಗಮಿಸಿದ್ದರು. ಸರಿಯಾಗಿ ವಿಷಯ ತಿಳಿಯದೆ ಬಂದಿದ್ದವರಲ್ಲೇ ಗೊಂದಲ ಉಂಟಾಗಿತ್ತು.

ಈ ವೇಳೆ ಸ್ಥಳಕ್ಕೆ ಮಂಜುನಾಥರೆಡ್ಡಿ ಆಗಮಿಸಿ ಬಿಪಿಎಲ್ ಕಾರ್ಡ್‍ಗಳನ್ನು ಸುಮ್ಮಸುಮ್ಮನೆ ಕೊಡಲಾಗುವುದಿಲ್ಲ. ಅರ್ಹರು ಯಾರು, ಮಾನದಂಡಗಳೇನು ಎಂಬುದನ್ನು ಅಲ್ಲಿದ್ದವರಿಗೆ ತಿಳಿಸಿಕೊಡುತ್ತಿದ್ದರು.

ಈ ಸಂದರ್ಭದಲ್ಲಿ ಬಿಟಿಎಂ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ತೀರ್ಮಾನಿಸಿರುವ ರವಿಕೃಷ್ಣರೆಡ್ಡಿ ಮತ್ತು ಬೆಂಬಲಿಗರು ಇಲ್ಲಿಗೆ ಬಂದರು.

ಈ ಸಂದರ್ಭದಲ್ಲಿ ರವಿಕೃಷ್ಣರೆಡ್ಡಿ ಹಾಗೂ ಮಂಜುನಾಥರೆಡ್ಡಿ ನಡುವೆ ಮಾತಿನ ಚಕಮಕಿ ಪ್ರಾರಂಭವಾಯಿತು. ಆಗ ರವಿಕೃಷ್ಣರೆಡ್ಡಿ ಬೆಂಬಲಿಗರು ಇದನ್ನು ಚಿತ್ರೀಕರಿಸಲು ಮುಂದಾದರು.

ಆಗ ಕಾಂಗ್ರೆಸ್ ಕಾರ್ಯಕರ್ತರು ಮಧ್ಯಪ್ರವೇಶಿಸಿ ಇದನ್ನು ವಿರೋಧಿಸಿದರು. ಇದರಿಂದಾಗಿ ಗಲಾಟೆ ಉಂಟಾಗಿ ಒಂದು ಹಂತದಲ್ಲಿ ಕೈ ಕೈ ಮಿಲಾಯಿಸುವ ಮಟ್ಟಕ್ಕೆ ಹೋಯಿತು.

ತಕ್ಷಣ ಪೆÇಲೀಸರು ಧಾವಿಸಿ ಎಲ್ಲರನ್ನು ಸಮಾಧಾನಪಡಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ