ಮುಂಬೈ:ಫೆ25: ಹೃದಯಾಘಾತದಿಂದ ಸಾವನ್ನಪ್ಪಿರುವ ಹಿರಿಯ ನಟಿ ಶ್ರೀದೇವಿಯವರ ಸಾವಿನ ಸುದ್ದಿ ಸಿನಿ ರಸಿಕರಲ್ಲಿ ಆಘಾತವನ್ನುಂಟುಮಾಡಿದ್ದು, ಗಣ್ಯರು ಕಂಬನಿ ಮಿಡಿದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವರು ಟ್ವಿಟ್ಟರ್ ನಲ್ಲಿ ಸಂತಾಪ ಸೂಚಿಸಿದ್ದಾರೆ.
ಟ್ವಿಟ್ಟರ್ನಲ್ಲಿ ಬಾಲಿವುಡ್ನ ಹಿರಿ ಕಿರಿಯ ನಟಿಯರು, ಶ್ರೀದೇವಿ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಶ್ರೀದೇವಿ ಅವರ ಅಕಾಲಿಕ ನಿಧನದಿಂದ ಪದಗಳಿಗೆ ನಿಲುಕದ ದು:ಖವಾಗಿದೆ. ಅವರೊಂದಿಗೆ ಹಲವು ವರ್ಷಗಳ ಹಿಂದೆ ಸ್ಕ್ರೀನ್ ಶೇರ್ ಮಾಡುವ ಅವಕಾಶ ಸಿಕ್ಕಿತ್ತು. ಅವರ ಕುಟುಂಬಕ್ಕೆ ದೇವರು ದುಃಖ ಬರಿಸುವ ಶಕ್ತಿ ನೀಡಲಿ ಎಂದು ಬಾಲಿವುಡ್ ನಟ ಅಕ್ಷಯ್ ಕುಮಾರ್ ಸಂತಾಪ ಸೂಚಿಸಿದ್ದಾರೆ.
ಶ್ರೀದೇವಿ ಅವರನ್ನು ಪ್ರೀತಿಸುವ ಪ್ರತಿಯೊಬ್ಬರಿಗೂ ಇದು ಕರಾಳ ದಿನ. ಮಾತುಗಳೇ ಬರುತ್ತಿಲ್ಲ ಎಂದು ಪ್ರಿಯಾಂಕಾ ಚೋಪ್ರಾ ಟ್ವಿಟ್ ಮಾಡಿದ್ದಾರೆ.
ನನ್ನ ಸರ್ವಕಾಲಿಕ ಮೆಚ್ಚಿನ ನಟಿ ಶ್ರೀದೇವಿ ಇನ್ನಿಲ್ಲ ಎಂಬುದನ್ನು ತಿಳಿದು ಹೃದಯ ಒಡೆದು ಹೋಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರೀತಿ ಜಿಂಟಾ ಶೋಕ ವ್ಯಕ್ತಪಡಿಸಿದ್ದಾರೆ.
ಇದೊಂದು ಭಯಾನಕ ನ್ಯೂಸ್, ಅಘಾತಕ್ಕೊಳಗಾಗಿದ್ದೇನೆ ಎಂದು ನಟ ರಿತೇಶ್ ದೇಶ್ಮುಖ್ ಹೇಳಿದ್ದಾರೆ. ಈಗಲೂ ನಂಬಲು ಸಾಧ್ಯವಾಗುತ್ತಿಲ್ಲ. ಅವರೊಬ್ಬ ಅಗಾಧ ಪ್ರತಿಭೆ ಎಂದ ನಟ ಅಜಯ್ ದೇವಗನ್ ಟ್ವಿಟ್ ಮಾಡಿದ್ದಾರೆ.
ಭಾರತದ ಅತೀ ಸುಂದರ ಪ್ರತಿಭಾನ್ವಿತ ನಟಿಯ ಅಕಾಲಿಕ ನಿಧನ ನಿಜವಾಕ್ಕೂ ಬೇಸರದ ಸಂಗತಿ ಎಂದು ಕ್ರಿಕೆಟಿಗ ವಿರಾಟ್ ಕೊಹ್ಲಿ ಟ್ವಿಟ್ ಮಾಡಿದ್ದಾರೆ.
ಇದಕ್ಕೆ ಏನೆಂದು ಪ್ರತಿಕ್ರಿಯಿಸಬೇಕು ಎಂದು ತಿಳಿಯುತ್ತಿಲ್ಲ. ನಾವೆಲ್ಲ ಶ್ರೀದೇವಿ ಅವರನ್ನು ನೋಡುತ್ತಾ ಬೆಳೆದವರು. ಅವರು ನಮ್ಮೊಂದಿಗಿಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳಲಾಗುತ್ತಿಲ್ಲ ಎಂದು ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಪ್ರತಿಕ್ರಿಯಿಸಿದ್ದಾರೆ.
Legendary Bollywood actor sridevi,death, pm modi, bollywood,condolence