ಪ್ರಧಾನಿ ಮೋದಿ ಹಾಗೂ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮಧ್ಯೆ ರಹಸ್ಯ ಒಪ್ಪಂದ: ಕೇಜ್ರಿವಾಲ್ ಆರೋಪ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮಧ್ಯೆ ರಹಸ್ಯ ಒಪ್ಪಂದವಾಗಿದೆ. ಇದೇ ಕಾರಣಕ್ಕಾಗಿ ಇಮ್ರಾನ್ ಖಾನ್, ಮೋದಿಯವರೇ ಮತ್ತೆ ಪ್ರಧಾನಿಯಾಗಬೇಕೆಂದು ಹೇಳಿದ್ದಾರೆ ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿರುವ ಕುರಿತು ಟ್ವೀಟ್ ಮಾಡಿರುವ ಅರವಿಂದ್ ಕೇಜ್ರಿವಾಲ್, ಪಾಕಿಸ್ತಾನ ಹಾಗೂ ಇಮ್ರಾನ್ ಖಾನ್ ಬಹಿರಂಗವಾಗಿ ನರೇಂದ್ರ ಮೋದಿ ಅವರಿಗೆ ಬೆಂಬಲ ನೀಡುತ್ತಿದ್ದಾರೆ. ಈ ಮೂಲಕ ಪಾಕ್ ಮತ್ತು ಮೋದಿ ಮಧ್ಯೆ ರಹಸ್ಯ ಒಪ್ಪಂದವಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ ಎಂದು ದೂರಿದ್ದಾರೆ.

ಪ್ರಧಾನಿ ಮೋದಿ ಅವರಿಗೆ ಸಹಾಯ ಮಾಡಲು ಪಾಕಿಸ್ತಾನವು ಪುಲ್ವಾಮಾದಲ್ಲಿ 40 ಜನ ಭಾರತೀಯ ಯೋಧರನ್ನು ಹತ್ಯೆ ಮಾಡಿದ್ಯಾ ಅಂತ ಜನರು ಪ್ರಶ್ನೆ ಮಾಡುತ್ತಿದ್ದಾರೆ ಎಂದು ಕೇಜ್ರಿವಾಲ್ ಗಂಭೀರವಾಗಿ ಆರೋಪಿಸಿದ್ದಾರೆ.

ಪಾಕಿಸ್ತಾನಕ್ಕೆ ಮೋದಿ ಅವರೇ ಯಾಕೆ ಗೆಲ್ಲಬೇಕು? ನಿಮ್ಮ ಹಾಗೂ ಪಾಕಿಸ್ತಾನದ ಮಧ್ಯೆ ಇರುವ ಸಂಬಂಧ ಎಷ್ಟು ಆಳವಾಗಿದೆ ಎಂಬುದನ್ನು ದೇಶ ಜನರ ಮುಂದಿಡಿ.

ನರೇಂದ್ರ ಮೋದಿ ಜಯ ಸಾಧಿಸಿದರೆ ಪಾಕಿಸ್ತಾನದಲ್ಲಿ ಪಟಾಕಿಗಳು ಸಿಡಿಯುತ್ತವೆ ಎಂಬುದನ್ನು ಪ್ರತಿ ಭಾರತೀಯರು ತಿಳಿಯಬೇಕು ಎಂದು ಹೇಳಿದ್ದಾರೆ.

ಇದೇ ವೇಳೆ ನಮೋ ಚಾನಲ್ ಗೆ ಪಾಕಿಸ್ತಾನ ಹಣ ಹೂಡಿದೆಯೇ ಎಂದು ಕೂಡ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.

ಪಿಡಿಪಿ ನಾಯಕಿ ಮೆಹಬೂಬ ಮುಫ್ತಿ ಕೂಡ ಟ್ವೀಟ್ ಮಾಡಿದ್ದು, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆಯಿಂದಾಗಿ ಮೋದಿ ಭಕ್ತರು ತಲೆ ಕೆರೆದುಕೊಳ್ಳುತ್ತಿದ್ದಾರೆ.

ಈ ಹೇಳಿಕೆ ನೀಡಿದ ಅವರನ್ನು ಹೊಗಳಬೇಕೋ ಅಥವಾ ಬೇಡವೋ ಎನ್ನುವ ಕುರಿತು ಗೊಂದಲಕ್ಕೀಡಾಗಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಕಾಂಗ್ರೆಸ್ ವಕ್ತಾರ ರಣ್‍ದೀಪ್ ಸಿಂಗ್ ಸುರ್ಜೇವಾಲ ಅವರು ಕೂಡ ಟ್ವೀಟ್ ಮಾಡಿದ್ದು, ಪಾಕಿಸ್ತಾನವು ಅಧಿಕೃತವಾಗಿ ಮೋದಿ ಅವರರೊಂದಿಗೆ ಮೈತ್ರಿ ಮಾಡಿಕೊಂಡಿದೆ. ಪ್ರಧಾನಿ ಮೋದಿ ಅವರಿಗೆ ಮತ ನೀಡಿದರೆ ಅದು ಪಾಕಿಸ್ತಾನಕ್ಕೆ ಮತ ನೀಡಿದಂತೆ. ಅವರಿಗೆ ಈ ಮೊದಲು ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ ಸ್ನೇಹಿತರಾಗಿದ್ದರು. ಈಗ ಇಮ್ರಾನ್ ಖಾನ್ ಸ್ನೇಹಿತರಾಗಿದ್ದಾರೆ. ಅವರ ಈಗ ರಹಸ್ಯ ಹೊರಬಿದ್ದಿದೆ ಎಂದು ಆರೋಪಿಸಿದ್ದಾರೆ.

lok sabha election,aravind kejriwal,pm modi,pakistan,imran khan

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ