ಬಾರದ ಲೋಕಕ್ಕೆ ಅತಿಲೋಕ ಸುಂದರಿ

ಮುಂಬೈ,ಫೆ.25-ಚಿತ್ರರಂಗದ ಮೋಹಕ ತಾರೆ, ಬಹುಭಾಷಾ ನಟಿ ಮತ್ತು ಭಾರತ ಚಿತ್ರೋದ್ಯಮದ ಪ್ರಥಮ ಸೂಪರ್‍ಸ್ಟಾರಿಣಿ ಶ್ರೀದೇವಿ (54) ಇನ್ನಿಲ್ಲ. ದುಬೈನಲ್ಲಿ ಖ್ಯಾತ ಚಿತ್ರ ನಟಿ ಹೃದಯಾಘಾತದಿಂದ ನಿಧನರಾದರು ಎಂದು ಕುಟುಂಬ ಮೂಲಗಳು ತಿಳಿಸಿವೆ.

ದುಬೈನಲ್ಲಿ ಕುಟುಂಬ ಸದಸ್ಯರೊಬ್ಬರ ವಿವಾಹ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಪತಿ-ನಿರ್ಮಾಪಕ ಬೋನಿ ಕಪೂರ್ ಹಾಗೂ ಕಿರಿಯ ಪುತ್ರಿ ಖುಷಿ ಜೊತೆ ದುಬೈಗೆ ಶ್ರೀದೇವಿ ತೆರಳಿದ್ದರು. ಹಿರಿಯ ಪುತ್ರಿ ಜಾಹ್ನವಿ ಕಾರಣಾಂತರಗಳಿಂದ ಅಲ್ಲಿಗೆ ಹೋಗಿರಲಿಲ್ಲ.

ನಿನ್ನೆ ತಡರಾತ್ರಿ ಶ್ರೀದೇವಿ ಅವರಿಗೆ ಹಠಾತ್ ಹೃದಯಾಘಾತವಾಗಿ ಕೊನೆಯುಸಿರೆಳೆದರು. ಅವರ ಪಾರ್ಥಿವ ಶರೀರವನ್ನು ವಿಶೇಷ ವಿಮಾನದ ಮೂಲಕ ಭಾರತಕ್ಕೆ ತರಲಾಗುವುದು.

ಶ್ರೀದೇವಿ ಅಕಾಲಿಕ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪ ರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು, ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಸಂಪುಟ ಸದಸ್ಯರೂ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷೆ ರಾಹುಲ್ ಗಾಂಧಿ ಸೇರಿದಂತೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಚಾಂದಿನಿ ಹಠಾತ್ ನಿಧನದಿಂದ ಹಿಂದಿ, ತಮಿಳು, ತೆಲುಗು, ಕನ್ನಡ ಚಿತ್ರರಂಗ ಸೇರಿದಂತೆ ಇಡೀ ಭಾರತೀಯ ಚಿತ್ರೋದ್ಯಮ ಆಘಾತಗೊಂಡಿದೆ. ಬಿಗ್ ಬಿ ಅಮಿತಾಭ್ ಬಚ್ಚನ್, ಸೂಪರ್‍ಸ್ಟಾರ್‍ಗಳಾದ ರಜನಿಕಾಂತ್, ಕಮಲ್‍ಹಾಸನ್, ಹಿರಿಯ ನಟರಾದ ಶತ್ರುಘ್ನ ಸಿನ್ಹ, ಜಿತೇಂದ್ರ ಮೊದಲಾದವರು ಕಂಬನಿ ಮಿಡಿದಿದ್ದಾರೆ.

ನಾನು ಒಳ್ಳೆಯ ಸ್ನೇಹಿತೆಯನ್ನು ಕಳೆದುಕೊಂಡೇ ಎಂದು ರಜನಿಕಾಂತ್ ಮರುಗಿದ್ದಾರೆ. ಸದ್ಮಾ ಚಿತ್ರದಲ್ಲಿ ಶ್ರೀದೇವಿಗೆ ಹಾಡಿರುವ ಜೋಗುಳ ಗೀತೆಯನ್ನು ನೆನೆಪಿಸಿಕೊಂಡು ಕಮಲ್ ಹಾಸನ ಕಣ್ಣೀರು ಹಾಕಿದ್ದಾರೆ.

ಶ್ರೀದೇವಿ ನಿಧನರಾದ ಸುದ್ದಿ ತಿಳಿಯುತ್ತಿದ್ದಂತೆ ಬಾಲಿವುಡ್‍ನ ಕೆಲವು ಖ್ಯಾತನಾಮರು ನಿನ್ನೆ ರಾತ್ರಿಯೇ ದುಬೈಗೆ ತೆರಳಿದ್ದಾರೆ. ಮುಂಬೈನ ಅಂಧೇರಿ ಪ್ರದೇಶದಲ್ಲಿರುವ ಅವರ ಮನೆ ಮುಂದೇ ಅಸಂಖ್ಯಾತ ಅಭಿಮಾನಿಗಳು ಜಮಾಯಿಸಿದ್ದರು. ಅವರಲ್ಲಿ ಶೋಕ ಮಡುಗಟ್ಟಿತ್ತು.

ಬಾಲಿವುಡ್ ಸಾಮ್ರಾಜ್ಞಿ: ಹೀರೋಗಳ ಪ್ರಭಾವ ಹೊಂದಿದ್ದ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದ ಶ್ರೀದೇವಿ ತಮ್ಮ ಮೋಹಕ ನೋಟ, ಅತ್ಯದ್ಭುತ ಅಭಿನಯ, ನೃತ್ಯಗಳಿಂದ ಅಕ್ಷರಶ: ಚಿತ್ರರಂಗದ ಸಾಮ್ರಾಜ್ಞಿಯಾಗಿ ಮಿಂಚಿದ್ದರು. ಶ್ರೀದೇವಿಯ ಮನೋಜ್ಞ ನಟನೆ ಭಾವನೆ ಹೊರಹೊಮ್ಮಿಸುವ ಆ ಕಣ್ಣುಗಳು, ಗೊಂಬೆಯಂಥ ನಾಸಿಕ ಮತ್ತು ಮೋಹಕ ನಗೆಗೆ ಮನ ಸೋಲದವರೇ ಇಲ್ಲ.

ಐದು ವರ್ಷವಿದ್ದಾಗಲೇ ಚಿತ್ರರಂಗಕ್ಕೆ ಧುಮುಕಿದ್ದ ಶ್ರೀದೇವಿ ಕೆಲವು ದಶಕಗಳ ಕಾಲ ಸೂಪರ್‍ಸ್ಟಾರ್ ಆಗಿ ಮೆರೆದಿದ್ದರು. ಭಾರತೀಯ ಚಿತ್ರರಂಗದ ಪ್ರಪ್ರಥಮ ಮಹಿಳಾ ಸೂಫರ್‍ಸ್ಟಾರಿಣಿ ಎಂಬ ಗೌರವಕ್ಕೂ ಅವರು ಪಾತ್ರರಾಗಿದ್ದರು. ಹಲವು ಚಿತ್ರಗಳನ್ನೂ ನಿರ್ಮಿಸಿ ನಿರ್ಮಾಪಕಿಯೂ ಆಗಿದ್ದರು. ಬದ್ಧತೆ, ಸಮಯ ನಿಷ್ಠೆ ಮತ್ತು ಕೆಲಸದಲ್ಲಿ ಶ್ರದ್ಧೆಗೆ ಅನ್ವರ್ಥ ನಾಮದಂತಿದ್ದ ಸಿರಿದೇವಿ ಅನೇಕ ನಟಿಯರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದರು.

ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ನಟಿಸಿದ್ದ ಶ್ರೀದೇವಿ ನಟಿಸಿದ್ದ ಬಹುತೇಕ ಎಲ್ಲ ಚಿತ್ರಗಳು ಸೂಪರ್ ಹಿಟ್ ಆಗಿವೆ. ಬಹುತೇಕ ಎಲ್ಲ ಸೂಪರ್‍ಸ್ಟಾರ್‍ಗಳೊಂದಿಗೆ ನಟಿಸಿದ ಹೆಗ್ಗಳಿಕೆ ಇವರದ್ದು. ಕನ್ನಡ, ತಮಿಳು, ತೆಲುಗು, ಮಲೆಯಾಳಂ, ಹಿಂದಿ ಚಿತ್ರಗಳಲ್ಲಿ ಅಭಿನಯಿಸಿ ಅಭಿಮಾನಿಗಳ ಅಭಿಮಾನದ ದೊಡ್ಡ ಪ್ರಭಾವಳಿಯಲ್ಲಿ ಮಿನುಗಿದ್ದರು. ಚಂದ್ರಮುಖಿಯಂಥ ಈ ನಟಿಗೆ ದೇಶ-ವಿದೇಶಗಳಲ್ಲೂ ಅಪಾರ ಅಭಿಮಾನಿಗಳಿದ್ದರು.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ