ಹಾಸನ:ಫೆ-19: ಭಗವಾನ್ ಬಾಹುಬಲಿಯ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ನನ್ನ ಸೌಭಾಗ್ಯ.12 ವರ್ಷಗಳಿಗೊಮ್ಮೆರ್ ನಡೆಯುವ ಈ ಧಾರ್ಮಿಕ ಕಾರ್ಯಕ್ರಮ ಮುಂದಿನ 12 ವರ್ಷ ನಮ್ಮ ದೇಶ ಎತ್ತ ಸಾಗಬೇಕು ಎನ್ನುವುದಕ್ಕೆ ದಾರಿ ತೋರಿಸಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಶ್ರವಣಬೆಳಗೊಳದ ಭಗವಾನ್ ಬಾಹುಬಲಿಗೆ ನಡೆಯುತ್ತಿರುವ ಮಹಾಮಸ್ತಕಾಭಿಷೇಕದ ಮೂರನೇ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಬಳಿಕ ಚಾವುಂಡರಾಯ ಸಭಾಂಗಣದಲ್ಲಿ ಮಾತನಾಡಿದ ಪ್ರಧಾನಿ ಮೋದಿ,
‘ಇದು ನನ್ನ ಸೌಭಾಗ್ಯ. ಹನ್ನೆರಡು ವರ್ಷಗಳಲ್ಲಿ ಒಮ್ಮೆ ಮಹಾಪರ್ವ ಆಗುತ್ತದೆ. ಇಂತಹ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿಯಾಗಿ ಈ ಸೇವೆ ಸಲ್ಲಿಸಲು ನನಗೆ ಅವಕಾಶ ಸಿಕ್ಕಿರುವುದು ನನ್ನ ಪುಣ್ಯ. ಪವಿತ್ರ ಸಂದರ್ಭದಲ್ಲಿ ನಿಮ್ಮ ಆಶೀರ್ವಾದ ಪಡೆಯುವ ಅವಕಾಶ ಸಿಕ್ಕಿದೆ. ದೇಶದಲ್ಲಿ ಧಾರ್ಮಿಕ ಪ್ರವೃತ್ತಿ ಹೆಚ್ಚುತ್ತಿದೆ, ಸಾಮಾಜಿಕ ಪ್ರವೃತ್ತಿ ಕ್ಷೀಣಿಸುತ್ತಿದೆ. ಧಾರ್ಮಿಕ ಕಾರ್ಯಗಳ ಜತೆಗೆ ಸಾಮಾಜಿಕ ಕಾರ್ಯಗಳು ಕೂಡ ನಡೆಯಬೇಕಿದೆ ಎಂದರು.
ನಮ್ಮ ಮುನಿಗಳು ಸಾಧು ಸಂತರು ದೇಶದ ಸಾಮಾಜಿಕ ಸ್ವಾಸ್ಥ್ಯಕ್ಕೆ ಶ್ರಮವಹಿಸಿದ್ದಾರೆ ಎಂದ ಪ್ರಧಾನಿ ಗೊಮ್ಮಟೇಶ್ವರನ ಬಗ್ಗೆ ಜೈನ ಶ್ಲೋಕವನ್ನು ಪಠಿಸಿದರು. ಅಲ್ಲದೇ ಗೊಮ್ಮಟೇಶ್ವರನ ಮೂರ್ತಿಗೆ ನಾನು ಪ್ರತಿದಿನ ನಮನ ಸಲ್ಲಿಸುತ್ತೇನೆ ಎಂದು ಹೇಳಿದರು.
ಕೇಂದ್ರ ಪುರಾತತ್ವ ಇಲಾಖೆಯು ವಿಂಧ್ಯಾಗಿರಿ ಬೆಟ್ಟದಲ್ಲಿ ಡೋಲಿ ಹೊರುವವರಿಗಾಗಿ ಪ್ರತ್ಯೇಕವಾಗಿ ಕೆತ್ತಿಸಿರುವ 630 ಮೆಟ್ಟಿಲುಗಳನ್ನು ಪ್ರಧಾನಿ ಉದ್ಘಾಟಿಸಿದರು. ಜತೆಗೆ ಶ್ರೀಮಠದ ವತಿಯಿಂದ ಶ್ರೀಧವಲತೀರ್ಥಂನಲ್ಲಿ ನಿರ್ಮಿಸಿರುವ 200 ಹಾಸಿಗೆಗಳ ಸಾಮರ್ಥ್ಯದ ಶ್ರೀ ಬಾಹುಬಲಿ ಜನರಲ್ ಆಸ್ಪತ್ರೆಯನ್ನು ಲೋಕಾರ್ಪಣೆ ಮಾಡಿದರು.
ಇದೇ ವೇಳೆ ಮೋದಿ ಅವರನ್ನು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಸನ್ಮಾನಿಸಿದರು. ಸ್ಮರಣಿಕೆಯಾಗಿ ಬೆಳ್ಳಿಯ ಕಳಶವನ್ನು ನೀಡಿ ಆಶೀರ್ವಚಿಸಿದರು.
PM narendra modi,shravanabelagola, mahamastakabhisheka