ಮೈಸೂರು:ಫೆ-೧೯: ಕರ್ನಾಟಕದಲ್ಲಿ ಕಮಿಷನ್ ಸರ್ಕಾರ ತೊಲಗಿಸಿ ಮಿಶನ್ ಸರ್ಕಾರವನ್ನ ಗೆಲ್ಲಿಸಿ. ಈ ಬಾರಿ ಬಿಜೆಪಿಯನ್ನ ಗೆಲ್ಲಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಕನ್ನಡದಲ್ಲಿ ಭಾಷಣ ಆರಂಭಿಸಿದರು. ಮೈಸೂರಿನ ನನ್ನ ಪ್ರೀತಿಯ ಬಂಧು ಭಗಿನಿಯರೆ ನಿಮ್ಮಗೆಲ್ಲಾ ನನ್ನ ನಮಸ್ಕರಗಳು. ಚಾಮುಂಡೇಶ್ವರಿ ಮಾತೆಗೆ ನನ್ನ ಪ್ರಣಾಮಗಳು. ಮೈಸೂರು ಅರಸರು, ಸರ್.ಎಂ.ವಿಶ್ವೇಶರಯ್ಯ, ರಾಷ್ಟ್ರಕವಿ ಕುವೆಂಪು, ಸುತ್ತೂರಿನ ಸ್ವಾಮೀಜಿ, ಬಾಲಗಂಗಾಧರನಾಥ ಸ್ವಾಮೀಜಿ ಅವರಿಗೆ ನನ್ನ ನಮಸ್ಕರಗಳು. ಮೈಸೂರು ರೇಶ್ಮೆ, ಮೈಸೂರು ಶ್ರೀಗಂಧ, ಮೈಸೂರು ಮಲ್ಲಿಗೆ, ಮೈಸೂರ್ಪಾಕ್ ಜಗತ್ ಪ್ರಸಿದ್ಧ ಎಂದ ಮೋದಿ, ಮೈಸೂರು ಪೇಟ ತೊಟ್ಟು ಭಾಷಣ ಆರಂಭಿಸಿ ಕನ್ನಡದಲ್ಲೇ ಮಾತನಾಡಿ ಎಲ್ಲರ ಗಮನ ಸೆಳೆದರು.
ಮೈಸೂರು ಮತ್ತು ಬೆಂಗಳೂರು ನಡುವಿನ ಜೋಡಿಹಳಿ ಮಾರ್ಗ, ವಿದ್ಯುತ್ ರೈಲು ಮತ್ತು ಹಮ್ ಸಫರ್ ರೈಲಿಗೆ ಚಾಲನೆ ನೀಡಲಾಗಿದೆ. ಇಂದು ನಮ್ಮ ದೇಶದ ರೈಲುಗಳಿಗೆ ಹೈಟೆಕ್ ಸ್ಪರ್ಶ ನೀಡಲಾಗಿದೆ. ಹಿಂದಿನ ಸರ್ಕಾರದಲ್ಲಿ ಕೇವಲ ರೈಲುಗಳನ್ನ ಸಂಸತ್ನಲ್ಲಿ ರೈಲ್ವೆ ಬಜೆಟ್ನಲ್ಲಿ ಮಾತ್ರ ಘೊಷಣೆ ಮಾಡಲಾಗುತ್ತಿತ್ತು ಎಂದು ಹಿಂದಿನ ಯುಪಿಎ ಸರ್ಕಾರವನ್ನು ಟೀಕಿಸಿದರು.
ಕರ್ನಾಟಕದಲ್ಲಿ ಕೆಟ್ಟ ಸರ್ಕಾರ ನಡೆಯುತ್ತಿದ್ದು, ಎಷ್ಟು ದಿನ ಈ ಸರ್ಕಾರ ಇರುತ್ತದೆಯೋ ಅಲ್ಲಿಯವರೆಗೂ ಕೆಟ್ಟ ದಿನಗಳು ಇರುತ್ತದೆ. ನಿಮಗೆ ಕಮಿಷನ್ ಸರ್ಕಾರ ಬೇಕಾ ಅಥವಾ ಮಿಶನ್ ಸರ್ಕಾರ ಬೇಕಾ ಎಂದು ನೀವೆ ನಿರ್ಧರಿಸಿ. ಈ ಬಾರಿ ಬಿಜೆಪಿ ಗೆಲ್ಲಿಸಿ- ನವಕರ್ನಾಟಕ ನಿರ್ಮಾಣಕ್ಕೆ ಪರಿವರ್ತನೆ ಮಾಡಿ ಎಂದು ಕರೆ ನೀಡಿದರು.
Mysuru, PM Narendra Modi