ಮೇಘಾಲಯದಲ್ಲಿ ವಿಧಾನಸಭೆ ಚುನಾವಣೆಗೆ ಮುನ್ನವೇ ಭಯೋತ್ಪಾದಕರ ಅಟ್ಟಹಾಸ

ಶಿಲ್ಲಾಂಗ್, ಫೆ.19-ಈಶಾನ್ಯ ರಾಜ್ಯ ಮೇಘಾಲಯದಲ್ಲಿ ವಿಧಾನಸಭೆ ಚುನಾವಣೆಗೆ ಮುನ್ನವೇ ಭಯೋತ್ಪಾದಕರು ಅಟ್ಟಹಾಸ ಮೆರೆದಿದ್ದಾರೆ. ಈಸ್ಟ್ ಬ್ಯಾರೋ ಹಿಲ್ಸ್ ಜಿಲ್ಲೆಯಲ್ಲಿನ ವಿಲಿಯಂನಗರದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ(ಎನ್‍ಸಿಪಿ) ಅಭ್ಯರ್ಥಿ ಜೋನಾಥನ್ ಎನ್. ಸಂಗ್ಮಾ ಹಾಗೂ ಅವರ ಇಬ್ಬರು ಅಂಗರಕ್ಷಕರನ್ನು ಉಗ್ರಗಾಮಿಗಳು ನಿನ್ನೆ ರಾತ್ರಿ ಹತ್ಯೆ ಮಾಡಿದ್ದಾರೆ.

ಮೇಘಾಲಯ ರಾಜಧಾನಿ ಶಿಲ್ಲಾಂಗ್‍ನಿಂದ 245 ಕಿ.ಮೀ.ದೂರದ ಸಮಂದಾ ಎಂಬ ಗ್ರಾಮದಲ್ಲಿ ನಿನ್ನೆ ರಾತ್ರಿ 8ರ ಸುಮಾರಿನಲ್ಲಿ ಈ ಹತ್ಯಾಕಾಂಡ ನಡೆದಿದೆ. 43 ವರ್ಷದ ಸಂಗ್ಮಾ ಚುನಾವಣಾ ಪ್ರಚಾರ ಕೈಗೊಂಡು ತಮ್ಮ ವಾಹನದಲ್ಲಿ ವಿಲಿಯಂನಗರಕ್ಕೆ ಹಿಂದಿರುಗುತ್ತಿದ್ದಾಗ ಸುಧಾರಿತ ಸ್ಫೋಟಕ ಸಾಧನ(ಐಇಡಿ) ಮೂಲಕ ವಿಧ್ವಂಸಕ ಕೃತ್ಯ ನಡೆಸಲಾಗಿದೆ. ಈ ಉಗ್ರರ ಈ ದಾಳಿಯಲ್ಲಿ ಸಂಗ್ಮಾ ಮತ್ತು ಅವರ ಇಬ್ಬರು ಭದ್ರತಾ ಸಿಬ್ಬಂದಿ ಹತರಾದರು ಎಂದು ಮೇಘಾಲಯ ಪೆÇಲೀಸ್ ಮಹಾ ನಿರ್ದೇಶಕ ಎನ್.ಬಿ.ಸಿಂಗ್ ತಿಳಿಸಿದ್ದಾರೆ.

ಪ್ರತ್ಯೇಕ ಗ್ಯಾರೋಲ್ಯಾಂಡ್‍ಗಾಗಿ ಹೋರಾಟ ನಡೆಸುತ್ತಿರುವ ಗ್ಯಾರೋ ನ್ಯಾಷನಲ್ ಲಿಬರೇಷನ್ ಆರ್ಮಿ(ಜಿಎನ್‍ಎಲ್‍ಎ) ಎಂಬ ಉಗ್ರಗಾಮಿ ಸಂಘಟನೆಯ ಕೈವಾಡ ಇದೆ ಎಂದು ಶಂಕಿಸಲಾಗಿದೆ. ಸಂಗ್ಮಾ ಅವರಿಗೆ ಮತ ಹಾಕಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆ ಸಂದೇಶ ಇರುವ ಬಿತ್ತಿಪತ್ರಗಳನ್ನು ಉಗ್ರರು ವಿಲಿಯಂ ನಗರದಲ್ಲಿ ಅಂಟಿಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಉಗ್ರಗಾಮಿಗಳ ಕೃತ್ಯವನ್ನು ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಖಂಡಿಸಿ, ಮೃತರಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

60 ಸದಸ್ಯ ಬಲದ ಮೇಘಾಲಯ ವಿಧಾನಸಭೆ ಚುನಾವಣೆಗೆ ಫೆ.27ರಂದು ಮತದಾನ ನಡೆಯಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ