ಬೆಂಗಳೂರು: ರಾಜ್ಯಾದ್ಯಂತ ಶುಕ್ರವಾರದಿಂದ ಶಾಲೆ-ಕಾಲೇಜುಗಳು ಆರಂಭವಾಗಿದ್ದು ,ಕೊರೋನಾ ಆತಂಕದಲ್ಲಿಯೇ ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷದ ಮೊದಲ ತರಗತಿಗೆ ಹಾಜರಾಗಿ ಖುಷಿಪಟ್ಟರು. ಹೆಚ್ಚಿನ ಶಾಲೆ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗಿಂತ ಶಿಕ್ಷಕರ ಉಪಸ್ಥಿತಿ ಅಕವಿತ್ತು.
ಬಹುತೇಕ ಶಾಲೆ-ಕಾಲೇಜುಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ತರಗತಿಗಳನ್ನು ನಡೆಸಲಾಯಿತು. ಕೆಲವೆಡೆ ಶಾಲೆಗಳನ್ನು ಅಲಂಕರಿಸಿದ್ದರೆ, ಇತರೆಡೆ ರಂಗೋಲಿ, ತಳಿರು ತೋರಣದಿಂದ ಸಿಂಗರಿಸಲಾಗಿತ್ತು. ಶಿಕ್ಷಕರು ವಿದ್ಯಾರ್ಥಿಗಳನ್ನು ಸ್ವಾಗತಿಸಿದ ಪ್ರಸಂಗವೂ ನಡೆಯಿತು.
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಹೋಲಿಸಿದರೆ ಹತ್ತನೇ ತರಗತಿ ವಿದ್ಯಾರ್ಥಿಗಳೇ ಹೆಚ್ಚಿನ ಪ್ರಮಾಣದಲ್ಲಿ ಶಾಲೆಗೆ ಧಾವಿಸಿ ಬಂದರು. ಶೇ 32.56 ಪಿಯು ವಿದ್ಯಾರ್ಥಿಗಳು ಹಾಜರಾದರೆ, ಶೇ.41ರಷ್ಟು ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಮೊದಲ ದಿನದಂದು ಶಾಲೆಗೆ ಆಗಮಿಸಿ ಸಂಭ್ರಮಿಸಿದರು. ಕೊರೋನಾ ಕಾರಣದಿಂದಾಗಿ ಹೆಬ್ರಿಯ ಕರ್ನಾಟಕ ಪ್ರೌಢ ಶಾಲೆ ಹಾಗೂ ಬ್ರಹ್ಮಾವರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಇಬ್ಬರು ಸಿಬ್ಬಂದಿಗೆ ಕೊರೋನಾ ಸೋಂಕು ಪತ್ತೆಯಾದ್ದರಿಂದ ಶಾಲೆ ತೆರೆಯಲಿಲ್ಲ.
ಗ್ರಾಮೀಣ ಭಾಗದಲ್ಲಿ ಅತ್ಯುತ್ಸಾಹ:
ರಾಜ್ಯದ ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳನ್ನು ಶಾಲೆಗೆ ವಿಶೇಷವಾಗಿ ಬರ ಮಾಡಿಕೊಂಡರೆ, ನಗರ ವ್ಯಾಪ್ತಿಗಳಲ್ಲಿ ವಿದ್ಯಾರ್ಥಿಗಳಿಗೆ ಕೊರೋನಾ ಕುರಿತ ಜಾಗೃತಿ ಮೂಡಿಸಲಾಯಿತು. ಕಳೆದ 9ತಿಂಗಳಿನಿಂದ ಮನೆಯಲ್ಲಿಯೇ ಇದ್ದ ಕೆಲ ವಿದ್ಯಾರ್ಥಿಗಳು ಕುತೂಹಲದಿಂದಲೇ ಶಾಲೆ-ಕಾಲೇಜಿನತ್ತ ಮುಖ ಮಾಡಿದರೆ ಇನ್ನೂ ಕೆಲ ವಿದ್ಯಾರ್ಥಿಗಳು ಮೊದಲ ದಿನದಂದೇ ಗೈರಾಗಿದ್ದಾರೆ. ಶಾಲೆ ಗೆ ಬಂದ ವಿದ್ಯಾರ್ಥಿಗಳನ್ನು ಥರ್ಮಲ್ ಸ್ಕ್ಯಾನಿಂಗ್ಗೆ ಒಳಪಡಿಸಿ, ಸ್ಯಾನಿಟೈಸರ್ ನೀಡಿ ತರಗತಿಗೆ ಕಳುಹಿಸಲಾಯಿತು. ಕೆಲವೆಡೆ ಪೆಷಕರಿಂದ ಸಹಿ ಮಾಡಿಸಿಕೊಂಡಿದ್ದ ಅನುಮತಿ ಪತ್ರವನ್ನು ವಿದ್ಯಾರ್ಥಿಗಳು ತಮ್ಮ ಶಿಕ್ಷಕರುಗಳಿಗೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್, ರಾಜ್ಯದೆಲ್ಲೆಡೆ ಶಾಲಾರಂಭವನ್ನು ಹಬ್ಬದ ರೀತಿಯಲ್ಲಿ ಆಚರಿಸಲಾಗಿದೆ. ಮೊದಲ ಅವಯನ್ನು ಮಕ್ಕಳ ಅನುಭವವನ್ನು ಹಂಚಿಕೊಳ್ಳಲು, ಕೊರೋನಾ ಕುರಿತ ಜಾಗೃತಿ ಮೂಡಿಸಲಾಯಿತು. ಧಾರವಾಡದಲ್ಲಿ ಶಾಲೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ ವಿದ್ಯಾರ್ಥಿಗಳನ್ನು ಬರಮಾಡಿಕೊಂಡರು. ಕೊಪ್ಪಳದಲ್ಲಿ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸುವ ಮೂಲಕ ವಿದ್ಯಾರ್ಥಿಗಳನ್ನು ಶಿಕ್ಷಕರು ಸ್ವಾಗತಿಸಿದರು. ತಳಿರು ತೋರಣಗಳ ಮೂಲಕ ಶಾಲೆಗಳನ್ನು ಸಿಂಗರಿಸಿ ವಿದ್ಯಾರ್ಥಿಗಳನ್ನು ಬರಮಾಡಿಕೊಂಡರೆ, ಉತ್ತರ ಕರ್ನಾಟಕ ಭಾಗದಲ್ಲಿ ವಿದ್ಯಾರ್ಥಿಗಳನ್ನು ತಮಟೆ ಮೂಲಕ ಶಿಕ್ಷಕರು ವಿದ್ಯಾರ್ಥಿಗಳನ್ನು ಸಂಸ್ಥೆಗಳಿಗೆ ಪ್ರೀತಿಯಿಂದ ಬರಮಾಡಿಕೊಂಡರು. ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಶಾಲೆ-ಕಾಲೇಜಿಗೆ ಹಾಜರಾಗಿದ್ದಾರೆ ಎಂದರು.
ಪಠ್ಯ ಕಡಿತ: ವಾರದೊಳಗೆ ನಿರ್ಧಾರ:
ಪಠ್ಯ ಕಡಿತ ಇನ್ನು ಒಂದು ವಾರದೊಳಗೆ ನಿರ್ಧಾರವಾಗಲಿದ್ದು ಸದ್ಯ ಪರೀಕ್ಷೆಗೆ ಮುಖ್ಯವಾಗಿರುವ ಹಾಗೂ ಮುಂದಿನ ಶಿಕ್ಷಣಕ್ಕೆ ಅಗತ್ಯವಾಗಿರುವ ಪಠ್ಯವನ್ನು ಬೋಸಲು ಸೂಚಿಸಲಾಗಿದೆ. ವಿದ್ಯಾರ್ಥಿಗಳ ಚಲನವಲನ, ಆರೋಗ್ಯ ಕುರಿತು ಗಮನಿಸಿ ಪರಿಹಾರ ಒದಗಿಸಲು ಮೆಂಟರ್ಗಳ ನಿಯೋಜನೆಯನ್ನು ಈ ಬಾರಿಯಿಂದ ಜಾರಿಗೊಳಿಸಲಾಗುವುದು. ಸರ್ಕಾರಿ ಮಾರ್ಗಸೂಚಿಯನ್ನು ಉಲ್ಲಂಘಿಸುವವರ ವಿರುದ್ಧ ಇಲಾಖೆ ಕಠಿಣ ಕ್ರಮ ಕೈಗೊಳ್ಳಲಿದೆ ಎಂದರು.
ಮತ್ತೆ ಶಾಲೆ ಮುಚ್ಚಬೇಡಿ-ವಿದ್ಯಾರ್ಥಿನಿ ಮೊರೆ
ಸಚಿವರೊಂದಿಗಿನ ಚರ್ಚೆಯ ವೇಳೆ ವಿದ್ಯಾರ್ಥಿನಿಯೊಬ್ಬಳು ಮತ್ತೆ ಕೊರೋನಾ ಹೆಚ್ಚಾಯಿತೆಂದರೆ ಶಾಲೆಗಳನ್ನು ಮುಚ್ಚಬೇಡಿ. ನಮಗೆ ಮೊಬೈಲ್ ತೆಗೆದುಕೊಳ್ಳಲು ತುಂಬಾ ಕಷ್ಟ. ನೆಟ್ವರ್ಕ್ ಸಮಸ್ಯೆಯಿಂದ ಪಾಠ ಕೇಳಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡರು.