ಕೋಲ್ಕತ್ತಾ: ಸದನದಲ್ಲಿ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಶೀಘ್ರ ಪಶ್ಚಿಮ ಬಂಗಾಳ ಮುಖ್ಯಮಂತ್ರಿಗೆ ಶಿಫಾರಸು ಮಾಡುವ ಸಾಧ್ಯತೆಗಳು ಬಲವಾಗಿವೆ. ತೃಣಮೂಲ ಕಾಂಗ್ರೆಸ್ನಲ್ಲಿ ಭಿನ್ನರ ಅಪಸ್ವರ ತಾರಕಕ್ಕೇರಿರುವಂತೆಯೇ, ಬಿಜೆಪಿ ಸಂಸದ ಸೌಮಿತ್ರ ಖಾನ್ ಈ ತೆರ ಅಭಿಮತ ವ್ಯಕ್ತಪಡಿಸಿದ್ದಾರೆ.
ಟಿಎಂಸಿಯೊಳಗಿನ ಭಿನ್ನಮತ, ಶಾಸಕರ ಅಸಮಾಧಾನ ದಿನೇ ದಿನೇ ತಾರಕಕ್ಕೇರುತ್ತಿದ್ದು, ಪಕ್ಷವು ಇದೀಗಲೂ ಸದನದಲ್ಲಿ ಸಾಕಷ್ಟು ಶಾಸಕರ ಬೆಂಬಲ ಹೊಂದಿದೆಯೋ ಇಲ್ಲವೋ ಎಂಬ ಪ್ರಶ್ನೆ ಮೂಡಿದೆ ಎಂದವರು ಹೇಳಿದ್ದಾರೆ.ಭಾರತೀಯ ಜನತಾ ಯುವಮೋರ್ಚಾದ ರಾಜ್ಯಾಧ್ಯಕ್ಷರೂ ಆಗಿರುವ ಸೌಮಿತ್ರ ಖಾನ್ ಜಲ್ಪಾಯ್ಗುರಿಯಲ್ಲಿ ಬಿಜೆಪಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶಾಸಕರ ಭಿನ್ನಮತ ಮತ್ತು ಅವರು ಟಿಎಂಸಿಯಿಂದ ಹೆಜ್ಜೆ ಹೊರಗಿಡುವ ರೀತಿ ಕಾಣುವಾಗ, ಸದನದಲ್ಲಿ ಬಹುಮತ ಸಾಬೀತು ಪಡಿಸುವಂತೆ ರಾಜ್ಯಪಾಲರು ಶೀಘ್ರಾತಿಶೀಘ್ರವಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ತಾಕೀತು ಮಾಡುವುದು ಬಹುತೇಕ ಖಚಿತವೆನಿಸಿದೆ ಎಂದು ಅವರು ಪುನರುಚ್ಚರಿಸಿದರು. ಮಮತಾ ಸಂಪುಟದ ಬಹುತೇಕ ಸಚಿವರು ಪಕ್ಷ ತೊರೆದು ಬಿಜೆಪಿ ಸೇರಲು ತವಕಪಟ್ಟಿದ್ದಾರೆಂದು ಹೇಳಿದರು.
ಆದರೆ, ಬಿಜೆಪಿ ನಾಯಕನ ಈ ಹೇಳಿಕೆ ಸರಿಯಲ್ಲ, ಚುನಾಯಿತ ಸರಕಾರವೊಂದನ್ನು ಈ ತೆರ ಪರೀಕ್ಷೆಗೊಡ್ಡಲು ಸಾಧ್ಯವಿಲ್ಲ. ಬಹುಮತದ ಶಾಸಕರು ಮಮತಾ ಜತೆಗಿದ್ದಾರೆಂದು ಟಿಎಂಸಿ ಸಂಸದ ಸೌಗತ ರಾಯ್ ಪ್ರತಿಕ್ರಿಯಿಸಿದ್ದಾರೆ.
ಟಿಎಂಸಿಯ ಪ್ರಮುಖ ನಾಯಕ ಸುವೇಂದು ಅಕಾರಿ ಅವರನ್ನು ಉಚ್ಚಾಟಿಸುವ ಧೈರ್ಯ ಪಕ್ಷಕ್ಕಿಲ್ಲ. ಈ ತೆರ ಕ್ರಮ ಕೈಗೊಂಡಲ್ಲಿ ಪಕ್ಷದ ಅಸ್ತಿತ್ವಕ್ಕೇ ಧಕ್ಕೆ ಬಂದೀತೆಂಬ ಭೀತಿ ಪಕ್ಷವನ್ನು ಬಲವಾಗಿ ಕಾಡಿದೆ. ಹಾಗಾಗಿ ಯಾರನ್ನೂ ಪಕ್ಷದಿಂದ ಉಚ್ಚಾಟಿಸಲು ಹಿಂಜರಿಯುತ್ತಿದೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ದಿಲೀಪ್ ಘೋಷ್ ಹೇಳಿದ್ದಾರೆ.
ಇನ್ನು, ಟಿಎಂಸಿಯ ಯಾರೇ ನಾಯಕರು ಇದುವರೆಗೂ ತಮ್ಮ ಮನೆ, ಕಚೇರಿಗಳಿಂದ ಹೊರಗಡಿ ಇಟ್ಟವರಲ್ಲ, 2021ರ ವಿಧಾನಸಭಾ ಚುನಾವಣೆಗೆ ಮುನ್ನ ವಾಸ್ತವ ಅರಿತುಕೊಳ್ಳಲು ಇದೀಗ ಅನಿವಾರ್ಯವಾಗಿ ಹೊರಗಡಿ ಇಡಲು ಶುರುವಿಟ್ಟಿದ್ದಾರೆ. ಜನರು ನೌಕೆಯನ್ನು ತೊರೆಯುತ್ತಿರುವ ಸ್ಥಿತಿ ಟಿಎಂಸಿಯದ್ದು. ಪಕ್ಷದ ಅಸ್ತಿತ್ವವೇ ಥರಗುಟ್ಟತೊಡಗಿದೆ. ಮುಂಬರುವ ಡಿಸೆಂಬರ್ ಪಕ್ಷದ ಪಾಲಿಗೆ ನಿಜಕ್ಕೂ ಸಂಕೀರ್ಣ ಘಟ್ಟವೆಂದು ಘೋಷ್ ವಿಶ್ಲೇಷಿಸಿದ್ದಾರೆ.
ಶಾಸಕ ಮಿಹಿರ್ ಗೋಸ್ವಾಮಿಯವರ ಅಳಲಿಗೆ ಟಿಎಂಸಿ ಸ್ಪಂದಿಸಲೇ ಇಲ್ಲ. ಬೇಸತ್ತ ಶಾಸಕರು ಈಚೆಗೆ ಬಿಜೆಪಿ ಸೇರಿದರು. ಮುಂದಿನ ದಿನಗಳಲ್ಲಿ ಇದೇ ತೆರ ಬೆಳವಣಿಗೆಗಳು ಪುನರಾವರ್ತನೆಯಾಗಲಿದೆ ಎಂದು ಘೋಷ್ ಭವಿಷ್ಯ ನುಡಿದರು.
294 ಸದಸ್ಯಬಲದ ಪ.ಬಂಗಾಳ ವಿಧಾನಸಭೆಗೆ ಮುಂದಿನ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ.