ಪ.ಬಂ.:ಮಮತಾಗೆ ಭಾರೀ ಹಿನ್ನಡೆ ಪ್ರಭಾವಿ ಸಚಿವ ಅಕಾರಿ ರಾಜೀನಾಮೆ

ಕೋಲ್ಕತಾ: ಪಶ್ಚಿಮಬಂಗಾಲದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಗೆ ಮುನ್ನವೇ ಆಳುವ ತೃಣಮೂಲ ಕಾಂಗ್ರೆಸ್‍ಗೆ ಭಾರೀ ಹಿನ್ನಡೆ ಉಂಟಾಗಿದ್ದು, ಪ್ರಭಾವಿ ಮತ್ತು ಜನಪ್ರಿಯ ನಾಯಕರಾಗಿರುವ ಸಾರಿಗೆ ಸಚಿವ ಸುವೇಂದು ಅಕಾರಿ ಮಮತಾ ಬ್ಯಾನರ್ಜಿ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ.
ಸುವೇಂದು ಅಕಾರಿ ಅವರು ತಮ್ಮ ರಾಜೀನಾಮೆಯನ್ನು ಫ್ಯಾಕ್ಸ್ ಮೂಲಕ ಮಮತಾ ಬ್ಯಾನರ್ಜಿಯವರಿಗೆ ಕಳುಹಿಸಿದ್ದು, ಅದನ್ನು ಈಗ ರಾಜ್ಯಪಾಲ ಜಗದೀಪ್ ಧನ್‍ಕರ್ ಅವರಿಗೆ ಇ-ಮೇಲ್ ಮೂಲಕ ಕಳುಹಿಸಿಕೊಟ್ಟಿದ್ದಾರೆ.ಇದನ್ನು ಸಂವಿಧಾನ ನಿಯಮಗಳ ರೀತಿ ನಿರ್ವಹಿಸಲಾಗುವುದು ಎಂಬುದಾಗಿ ರಾಜ್ಯಪಾಲರು ಟ್ವೀಟ್‍ನಲ್ಲಿ ತಿಳಿಸಿದ್ದಾರೆ.
ಬಿಜೆಪಿ ಹೊರಗಿನವರ ಪಕ್ಷ. ಬಿಜೆಪಿಗೆ ರಾಜ್ಯದಲ್ಲಿ ಅವಕಾಶ ನೀಡಲಾಗದು. ತೃಣಮೂಲ ಕಾಂಗ್ರೆಸ್‍ನ ಕೆಲವು ನಾಯಕರು ಪ್ರತಿಪಕ್ಷ ಕ್ಯಾಂಪ್ ಜೊತೆ ಸಂಪರ್ಕ ಹೊಂದಿರುವುದು ತನ್ನ ಗಮನಕ್ಕೆ ಬಂದಿದೆ. ಪಕ್ಷ ಮತ್ತು ಸರಕಾರದಿಂದ ಕೆಲವು ತಪ್ಪುಗಳಾಗಿರಬಹುದು. ಅದನ್ನೆಲ್ಲ ಸರಿಪಡಿಸಲು ತಾನೇ ಮುಂದಾಗಲಿದ್ದೇನೆ ಎಂಬುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಪತ್ರಿಕಾಗೋಷ್ಠಿ ಮೂಲಕ ಹೇಳಿಕೆ ನೀಡಿದ ಒಂದೇ ದಿನದಲ್ಲಿ ಈ ಯುವ ನಾಯಕನ ರಾಜೀನಾಮೆ ಪ್ರಕಟವಾಗಿದೆ.ಸುವೇಂದು ಅವರು ಮಿಡ್ನಾಪುರ ಜಿಲ್ಲೆ ಸುತ್ತಮುತ್ತಲ 35-40ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಭಾವ ಹೊಂದಿದ್ದು, ಅವರ ರಾಜೀನಾಮೆ ಟಿಎಂಸಿ ಪಾಲಿಗೆ ದುಬಾರಿಯಾಗಲಿದೆ ಎಂಬುದಾಗಿ ವಿಶ್ಲೇಷಿಸಲಾಗಿದೆ.
ಹೇಗಾದರೂ ಪ.ಬಂ.ದಲ್ಲಿ ಬಿಜೆಪಿ ಅಕಾರಕ್ಕೆ ಬರುವುದನ್ನು ತಡೆಯಬೇಕು ಎಂಬುದಾಗಿ ಶತಾಯಗತಾಯ ಹೆಣಗುತ್ತಿರುವ ಮಮತಾ ನೇತೃತ್ವದ ತೃಣಮೂಲ ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರ ಹತ್ಯೆಯಂತಹ ರಾಜಕೀಯ ಬರ್ಬರತೆಯಲ್ಲಿ ತೊಡಗಿರುವ ನಡುವೆಯೇ ಹಲವು ತೃಣಮೂಲ ಕಾಂಗ್ರೆಸ್ ನಾಯಕರು ಮಮತಾ ಅವರ ದುರ್ನೀತಿಗಳ ವಿರುದ್ಧ ತಿರುಗಿಬೀಳಲಾರಂಭಿಸಿರುವುದು ದೇಶದ ಗಮನ ಸೆಳೆದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ