ಹೊಸದಿಲ್ಲಿ:ಪತ್ರಕರ್ತ ಅರ್ನಾಬ್ ಗೋ ಸ್ವಾಮಿ ಅವರಿಗೆ ಮಧ್ಯಂತರ ಜಾಮೀನು ನೀಡಿರುವ ಸುಪ್ರೀಂಕೋರ್ಟ್ ಆದೇಶವನ್ನು ವಿರೋಸಿ,ಅವಹೇಳನಕಾರಿ ಟ್ವೀಟ್ ಮಾಡಿದ್ದ ಹಾಸ್ಯನಟ ಕುನಾಲ್ ಕಮ್ರಾ ವಿರುದ್ಧ ಇಬ್ಬರು ಕಾನೂನು ವಿದ್ಯಾರ್ಥಿಗಳು ಹಾಗೂ ಮೂವರು ವಕೀಲರು ದೂರುದಾಖಲಿಸಿದ್ದಾರೆ.
ತ್ರಿವರ್ಣ ಧ್ವಜ ಹೊಂದಿರುವ ಸುಪ್ರೀಂಕೋರ್ಟ್ ಪೊಟೋ ಬದಲಾಗಿ ಬಿಜೆಪಿಯ ಕೇಸರಿ ಧ್ವಜಹೊಂದಿರುವಂತೆ ನ್ಯಾಯಾಲಯದ ಪೊಟೋ ತಿರುಚಿ, ಸುಪ್ರೀಂಕೋರ್ಟ್ ಈ ದೇಶದ ಅತಿದೊಡ್ಡ ಹಾಸ್ಯ ಕ್ಷೇತ್ರವಾಗಿ ಮಾರ್ಪಾಡಾಗಿದೆ ಎಂದು ಕುನಾಲ್ ಟ್ವೀಟ್ ಮಾಡಿದ್ದಾರೆ.
ನ್ಯಾಯಾಲಯದ ಕುರಿತು ಕುನಾಲ್ ನೀಡಿರುವ ಹೇಳಿಕೆ ಬಗ್ಗೆ ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿರುವುದಲ್ಲದೆ, ವಕೀಲರು ಕೂಡ ಆತನವಿರುದ್ಧ ಕ್ರಮ ಕೈಗೊಳ್ಳಲು ಸಮ್ಮತಿಸುವಂತೆ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರಿಗೆ ಮನವಿ ಮಾಡಿದ್ದರು.
ಬಳಿಕ ಕೆ.ಕೆ. ವೇಣುಗೋಪಾಲ್, ಕುನಾಲ್ ಹೇಳಿಕೆಗಳು ಹಾಸ್ಯವಾಗಿ ಉಳಿದಿಲ್ಲ ಬದಲಾಗಿ ನ್ಯಾಯಾಲಯದ ಅವಹೇಳನ ಮಿತಿಯನ್ನೂ ಮೀರಿವೆ. ಆಡಳಿತರೂಢ ಪಕ್ಷದ ಧ್ವಜದೊಂದಿಗೆ ಸುಪ್ರೀಂನ್ನು ಚಿತ್ರಿಕರಿಸಿರುವುದು ನ್ಯಾಯಾಲಯದ ವಿರುದ್ಧ ಜನರನ್ನು ಪ್ರಚೋದಿಸುವ ದುರುದ್ದೇಶ ಹೊಂದಿದೆ. ಅಲ್ಲದೆ, ನ್ಯಾಯಮೂರ್ತಿಗಳ ತೀರ್ಪು ನ್ಯಾಯಬದ್ಧವಾಗಿರದೇ ಪಕ್ಷಕ್ಕಾಗಿ ತೀರ್ಪು ನೀಡಿದ್ದಾರೆ ಎಂದು ಬಿಂಬಿಸುವಂತಿದೆ.
ಸಂವಿಧಾನ ಬದ್ಧವಾಗಿ ಸಿಗುವ ವಾಕ್ ಸ್ವಾತಂತ್ರ್ಯವನ್ನು ದುರುಪಯೋಗ ಪಡಿಸಿಕೊಂಡು ದೇಶದ ಸರ್ವೋಚ್ಛ ನ್ಯಾಯಲಯ ವಿರುದ್ಧವೇ ಅವಹೇಳನ ಮಾಡುವವರು ಈ ಮುಖಾಂತರ ಬುದ್ದಿ ಕಲಿಯಬೇಕು ಈ ಹಿನ್ನೆಲೆ ಕಮ್ರಾ ವಿರುದ್ಧದ ಕಾನೂನು ಕ್ರಮಕ್ಕೆ ಸಮ್ಮತಿಸಿದ್ದೇನೆ ಎಂದು ಗುರುವಾರ ತಿಳಿಸಿದ್ದರು.
ಈ ಹಿನ್ನೆಲೆ ಸುಪ್ರೀಂವಿರುದ್ಧದ ಅವಹೇಳನಕಾರಿ ಹೇಳಿಕೆಗಳನ್ನು ನಿಯಂತ್ರಿಸುವ ನಿಯಮ 3(ಸಿ) ಅನ್ವಯ ಶ್ರೀರಂಗ್ ಕಾಟ್ನೇಶ್ವರ್ಕರ್,ನಿತಿಕಾ ದುಹಾನ್ ಎಂಬ ಕಾನೂನು ವಿದ್ಯಾರ್ಥಿಗಳು ಹಾಗೂ ಅಮೆ ಅಭಯ್ ಶಿರ್ಶಿಕರ್, ಅಭಿಷೇಕ್ಶರದ್ ರಷ್ಕರ್ ಹಾಗೂ ಸತ್ಯೇಂದ್ರ ವಿನಾಯಕ್ ಮುರುಳೆ ಎಂಬ ವಕೀಲರು ಸೇರಿ ಜಂಟಿಯಾಗಿ ದೂರು ದಾಖಲಿಸಿದ್ದಾರೆ.