ಹೊಸದಿಲ್ಲಿ :ಚೀನಾ ಗಡಿಯಲ್ಲಿನ ವಾಸ್ತವ ನಿಯಂತ್ರಣ ರೇಖೆ(ಎಲ್ಎಸಿ)ಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಭಾರತೀಯ ಯೋಧರಿಗೆ ತೀವ್ರ ಚಳಿಯನ್ನು ಎದುರಿಸುವಲ್ಲಿ ಕೇಂದ್ರ ಸರಕಾರವು ಅಮೆರಿಕದಿಂದ ವಿಶೇಷ ಬೆಚ್ಚಗಿನ ಜಾಕೆಟ್ಗಳನ್ನು ಒದಗಿಸಲು ಮುಂದಾಗಿದೆ.ಈ ಮೂಲಕ ಗಡಿಯಲ್ಲಿನ ಯೋಧರಿಗೆ ಇನ್ನಷ್ಟು ಸೌಕರ್ಯಗಳನ್ನು ಕಲ್ಪಿಸಿ ಅವರು ನಿರಾಳರಾಗಿರುವಂತೆ ನೋಡಿಕೊಳ್ಳಲು ಮೋದಿ ಸರಕಾರ ಮುಂದಾಗಿದೆ.
ಸಿಯಾಚಿನ್ನಲ್ಲಿನ ಪಶ್ಚಿಮ ಮುಂಚೂಣಿ ಪ್ರದೇಶಗಳು ಮತ್ತು ಪೂರ್ವ ಲಡಾಖ್ನಲ್ಲಿ ಈಗ ಅತ್ಯಂತ ಅಸಹನೀಯ ಚಳಿ ಇದ್ದು, ಭಾರತೀಯ ಯೋಧರು ಕಳೆದ ಅನೇಕ ದಶಕಗಳಿಂದ ಬೆಚ್ಚನೆಯ ಜಾಕೆಟ್ ಸೇರಿದಂತೆ ಸೂಕ್ತ ಸೌಕರ್ಯಗಳಿಲ್ಲದೆ ತೀವ್ರ ಸಂಕಷ್ಟವನ್ನು ಅನುಭವಿಸುತ್ತಿದ್ದರು. ಆದರೆ ಈಗ ಕೇಂದ್ರ ಸರಕಾರ ಅಮೆರಿಕದ ರಕ್ಷಣಾ ಪಡೆಗಳು ಬಳಸುವಂತಹುದೇ ಗುಣಮಟ್ಟದ ಜಾಕೆಟ್ಗಳನ್ನು ತರಿಸಿಕೊಂಡು ಅವುಗಳನ್ನು ನಮ್ಮ ಯೋಧರಿಗೆ ಒದಗಿಸಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ಭಾರತೀಯ ಯೋಧರಿಗಾಗಿ ಈಗಾಗಲೇ 60ಸಾವಿರ ಇಂತಹ ಸೆಟ್ಗಳನ್ನು ಒದಗಿಸಲಾಗಿದೆ.ಈ ವರ್ಷ ಹೆಚ್ಚುವರಿಯಾಗಿ 30ಸಾವಿರ ಸೆಟ್ಗಳನ್ನು ಒದಗಿಸಲು ಸರಕಾರ ಮುಂದಾಗಿದ್ದು, ಇದರೊಂದಿಗೆ 90ಸಾವಿರ ಯೋಧರಿಗೆ ಇಂತಹ ಸೌಕರ್ಯ ಒದಗಿಸಲು ಬೇಕಾದ ವ್ಯವಸ್ಥೆ ಮಾಡಿಕೊಂಡಿದೆ. ಪೂರ್ವ ಲಡಾಖಿನಲ್ಲಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್ಎ) ಆಕ್ರಮಣ ನಡೆಸಲು ಯತ್ನಿಸಿದ ಬಳಿಕ ಉಂಟಾಗಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಆ ಪ್ರದೇಶದಲ್ಲಿ 60ಸಾವಿರಕ್ಕೂ ಅಕ ಯೋಧರನ್ನು ನಿಯೋಜಿಸಿದೆ.ಅಲ್ಲದೆ ಅವರಿಗೆ ಅಮೆರಿಕದಿಂದ ಅತ್ಯಾಧುನಿಕ ಅಸಾಲ್ಟ್ ರೈಫಲ್ಗಳು ಸೇರಿದಂತೆ ವಿಶೇಷ ಅಸ್ತ್ರಗಳನ್ನು ಒದಗಿಸಿದ್ದು,
ಎಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ದೇಶದ ಗಡಿಗಳನ್ನು ಸುರಕ್ಷಿತವಾಗಿ ಕಾಯ್ದುಕೊಳ್ಳಲು ಕೇಂದ್ರ ಸರಕಾರ ಸರ್ವ ಸಿದ್ಧತೆ ನಡೆಸಿದೆ.