ಬೆಂಗಳೂರು: ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೀಳು ಮಟ್ಟದ ಭಾಷೆ ಬಳಕೆ ಮಾಡುತ್ತಿರುವುದು ವಿಪಕ್ಷಗಳು ರಾಜಕೀಯ ಅಸ್ತಿತ್ವ ಕಳೆದುಕೊಂಡಿರುವುದರ ಸಂಕೇತವಾಗಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಕ್ಯಾ. ಗಣೇಶ್ ಕಾರ್ಣಿಕ್ ಹೇಳಿದರು.
ಈ ಕುರಿತು ಮಾತನಾಡಿದ ಅವರು, ಕೇವಲ ರಾಜಕೀಯ ವಿದೂಷಕರಾಗಿ ಕಾಡು ಮನುಷ್ಯರಂತೆ ವರ್ತಿಸುತ್ತಿರುವ ಇವರು ನಾಗರಿಕ ಸಮಾಜದ ಸೌಜನ್ಯದ ಪರಿ ಮೀರುವ ರೀತಿಯ ಹೇಳಿಕೆ ನೀಡಲು ಸಾಧ್ಯ. ಅದರಲ್ಲೂ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾಗಿದ್ದವರ ಈ ರೀತಿಯ ಹೇಳಿಕೆಗಳು ಪ್ರತಿಕ್ರಿಯೆಗೂ ಅರ್ಹವಲ್ಲ ಎನ್ನುವುದು ಬಿಜೆಪಿ ಅಭಿಪ್ರಾಯ. ಕೀಳು ಮಟ್ಟದ ಅಸಂಸ್ಕøತ ನಡವಳಿಕೆಗಳು ಅವರು ಅಲಂಕರಿಸಿದ ಹುದ್ದೆಗೂ ಶೋಭೆ ತರುವುದಿಲ್ಲ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸಿ, ಸಾಮಾಜಿಕ ಜೀವನದಲ್ಲಿ ಸ್ಥಾನಮಾನ ನೀಡಿ, ಮೂರು ಬಾರಿ ಸಂಸದರನ್ನಾಗಿ ಮಾಡಿ, ರಾಜ್ಯ ಮಟ್ಟದ ನಾಯಕರನ್ನಾಗಿ ಬೆಳೆಸಿದ ಪಕ್ಷ ಬಿಜೆಪಿ. ಕೇವಲ ಕೌಟುಂಬಿಕ ರಾಜಕೀಯ ಮಾಡಿಕೊಂಡು ಬದುಕುತ್ತಿರುವ ಹಾಗೂ ಕೆಲ ಜಿಲ್ಲೆಗಳಿಗೆ ಸೀಮಿತವಾಗಿರುವ ಅಪ್ರಬುದ್ಧ ನಾಯಕರಿಗೆ ಇಂಥ ಸೂಕ್ಷ್ಮ ವಿಚಾರಗಳು ಅರ್ಥವಾಗಲಾರದು ಎಂದು ಹೇಳಿದರು.