ಹಂತಹಂತವಾಗಿ ಮನೆ ನಿರ್ಮಾಣ: ಸಿಎಂ ಬಿಎಸ್‍ವೈ ಚಿಂತನೆ ರಾಜ್ಯದ ಪ್ರತಿಯೊಬ್ಬರಿಗೂ ನಿವೇಶನ

ಶಿವಮೊಗ್ಗ: ರಾಜ್ಯದಲ್ಲಿರುವ ಪ್ರತಿಯೊಬ್ಬರಿಗೂ ನಿವೇಶನ ಒದಗಿಸುವುದು ಹಾಗೂ ಹಂತ ಹಂತವಾಗಿ ಮನೆಯನ್ನು ನಿರ್ಮಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಹೇಳಿದರು.
ಮಂಗಳವಾರ ಶಿಕಾರಿಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಸೌಲಭ್ಯವನ್ನು ವಿತರಿಸಿ ಮಾತನಾಡಿ, ಪ್ರತಿಯೊಬ್ಬರ ಮನೆಗೆ ಹಕ್ಕುಪತ್ರ ತಲುಪಿಸಲಾಗುವುದು. ಮಧ್ಯವರ್ತಿಗಳಿಗೆ ಯಾರೂ ಹಣ ನೀಡಬಾರದು. ಯಾರಾದರೂ ದುಡ್ಡು ಕೇಳಿದರೆ ಜಿಲ್ಲಾಕಾರಿಗೆ ದೂರು ನೀಡುವಂತೆ ಅವರು ತಿಳಿಸಿದರು.
ಉತ್ತಮ ಮಳೆಯಿಂದ ಹೆಚ್ಚು ಇಳುವರಿ:
ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ಇದರಿಂದ ಹೆಚ್ಚಿನ ಇಳುವರಿ ನಿರೀಕ್ಷಿಸಲಾಗಿದೆ. ಕೃಷಿಯನ್ನು ಸುಸ್ಥಿರಗೊಳಿಸುವುದು ಸರ್ಕಾರದ ಗುರಿಯಾಗಿದೆ. ತಾಲೂಕಿನಲ್ಲಿ ಮೆಕ್ಕೆಜೋಳ ಉತ್ತಮವಾಗಿ ಬಂದಿದೆ. ಕಾಳು ಬಿಡಿಸುವ ಯಂತ್ರವನ್ನು ರೈತರಿಗೆ ಸಬ್ಸಿಡಿ ದರದಲ್ಲಿ ಒದಗಿಸಲಾಗುತ್ತಿದೆ. ಇದಕ್ಕಾಗಿ ಶಿಕಾರಿಪುರ ತಾಲೂಕಿಗೆ 1.40 ಕೋಟಿ ರೂ. ನಿಗದಿಪಡಿಸಲಾಗಿದೆ ಎಂದು ಹೇಳಿದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಶಿಕಾರಿಪುರ ತಾಲೂಕಿನ 14 ಗ್ರಾಮ ಪಂಚಾಯತ್ ವ್ಯಾಪ್ತಿಯ 403 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗುತ್ತಿದೆ. ಮುಂದಿನ ಒಂದೆರಡು ವಾರಗಳ ಒಳಗಾಗಿ ಇನ್ನೂ 13 ಗ್ರಾಮ ಪಂಚಾಯತ್ ವ್ಯಾಪ್ತಿಯ 1 ಸಾವಿರ ಜನರಿಗೆ ಹಕ್ಕುಪತ್ರ ವಿತರಿಸಲಾಗುವುದು ಎಂದರು.
ಸೌಲಭ್ಯಗಳ ವಿತರಣೆ: ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ನಿವೇಶನ ರಹಿತರಿಗೆ ಹಕ್ಕುಪತ್ರ, ಕೃಷಿಕರಿಗೆ ಕೃಷಿ ಯಂತ್ರೋಪಕರಣ, ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್, ಆಕಸ್ಮಿಕವಾಗಿ ಸಾವಿಗೀಡಾದ ರೈತರಿಗೆ ಪರಿಹಾರ ಧನ ವಿತರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ