ಬಂಗಾರಪ್ಪ ಸ್ಮಾರಕ ನಿರ್ಮಿಸಲು ರೂ.1 ಕೋಟಿ: ಬಿಎಸ್‍ವೈ

ಶಿವಮೊಗ್ಗ: ಸೊರಬ ಪಟ್ಟಣದಲ್ಲಿ ದಿ.ಬಂಗಾರಪ್ಪ ಅವರ ಸ್ಮಾರಕ ನಿರ್ಮಿಸಲು ಈಗಾಗಲೇ 1 ಕೋಟಿ ರೂ. ಅನುದಾನ ಬಿಡುಗಡೆ ಮಾಡಲು ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ 87ನೇ ಜನ್ಮಸ್ಮರಣೆ ಹಾಗೂ ಸೊರಬ ಪಟ್ಟಣದಲ್ಲಿ 21.15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಉದ್ಯಾನವನವನ್ನು ಆನ್‍ಲೈನ್ ಸಮಾರಂಭದ ಮೂಲಕ ಸೋಮವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಉದ್ಘಾಟಿಸಿ ಮಾತನಾಡಿದರು.
ಸಮಾಜಮುಖಿ ಚಿಂತನೆಯ ನಾಯಕರಾಗಿದ್ದ ಬಂಗಾರಪ್ಪ ಅವರು ಜಾರಿಗೊಳಿಸಿದ ಜನಪರ ಹಾಗೂ ದೂರದೃಷ್ಟಿಯ ಯೋಜನೆಗಳಿಂದಾಗಿ ಇಂದಿಗೂ ಅವರು ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ. ಶಿಕ್ಷಣ, ಆರೋಗ್ಯ, ಕೃಷಿ ಕ್ಷೇತ್ರದಲ್ಲಿ ಬಂಗಾರಪ್ಪ ಅವರು ತಂದ ದೂರದೃಷ್ಟಿ ಯೋಜನೆಗಳಿಂದಾಗಿ ಅವರು ಜನಮಾನಸದಲ್ಲಿ ಇಂದಿಗೂ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಕೃಷಿ ಕಾರ್ಮಿಕರು, ರೈತರು, ದೀನ ದಲಿತರು ಮತ್ತು ಗ್ರಾಮೀಣ ಜನತೆಯ ಅಭ್ಯುಧಯಕ್ಕಾಗಿ ನಿರಂತರವಾಗಿ ಶ್ರಮಿಸಿದ ಅವರು ಜನಪರ ಚಿಂತನೆಯ ನಾಯಕ ಎಂದು ಬಣ್ಣಿಸಿದರು.
ಸೊರಬ ಪಟ್ಟಣದಲ್ಲಿ ಉದ್ಘಾಟಿಸಲಾಗಿರುವ ಉದ್ಯಾನವನ್ನು ಪಟ್ಟಣ ಪಂಚಾಯಿತಿ ಆಡಳಿತ ಸರಿಯಾಗಿ ನಿರ್ವಹಣೆ ಮಾಡಬೇಕು ಎಂದು ಸೂಚನೆ ನೀಡಿದರು.
ಕೋವಿಡ್ ಸಂಕಷ್ಟದ ನಡುವೆಯೂ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ರಾಜ್ಯದ ಎಲ್ಲಾ ಭಾಗಗಳನ್ನು ಸಮಾನವಾಗಿ ಅಭಿವೃದ್ಧಿ ಪಡಿಸಲು ನಾವು ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಹೇಳಿದರು.
ಸಾರ್ವಜನಿಕ ಸಮಾರಂಭದಲ್ಲಿ ಶಾಸಕ ಕುಮಾರ ಬಂಗಾರಪ್ಪ ಅಧ್ಯಕ್ಷತೆ ವಹಿಸಿದ್ದರು. ಬಳಿಕ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ