ಹೊಸದಿಲ್ಲಿ: ದೇಶದಲ್ಲಿ ದಿನೇದಿನೆ ಸಕ್ರಿಯ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿರುವ ಬೆನ್ನಲ್ಲೇ, ಕೇಂದ್ರ ಸರ್ಕಾರದ ಎಲ್ಲ ಮಾರ್ಗಸೂಚಿ ಪಾಲಿಸಿದರೆ ಫೆಬ್ರವರಿ ವೇಳೆಗೆ ಸಕ್ರಿಯ ಸೋಂಕಿತರ ಸಂಖ್ಯೆ 40 ಸಾವಿರಕ್ಕೆ ಇಳಿಕೆಯಾಗಲಿದೆ ಎಂದು ಕೇಂದ್ರ ಸರ್ಕಾರ ರಚಿಸಿದ ತಜ್ಞರ ಸಮಿತಿ ತಿಳಿಸಿದೆ.
ಬೆಂಗಳೂರಿನಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ(ಐಐಎಸ್ಸಿ) ಪೊ.ಬಿ. ಬಾಗ್ಚಿ ಸೇರಿದ ಹಲವು ತಜ್ಞರ ಸಮಿತಿಯು ಕೊರೋನಾ ಇಳಿಕೆ ಕುರಿತು ಮಾಹಿತಿ ನೀಡಿದ್ದು, ಮುಂದಿನ ದಿನಗಳಲ್ಲೂ ದೇಶದ ಜನ ಸಾಮಾಜಿಕ ಅಂತರ ಸೇರಿ ಹಲವು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವುದು ಅವಶ್ಯ ಎಂದು ತಿಳಿಸಿದೆ.
ಮೇ-ಜೂನ್ನಲ್ಲಿ ದೇಶದಲ್ಲಿ ಕೊರೋನಾ ನಿಯಂತ್ರಣದಲ್ಲಿತ್ತು. ಸೆಪ್ಟೆಂಬರ್ ಮಧ್ಯಭಾಗದಲ್ಲಿ ದೇಶದಲ್ಲಿ ಕೊರೋನಾ ಉತ್ತುಂಗಕ್ಕೇರಿತ್ತು. ಇದೆಲ್ಲ ಗಮನಿಸಿದರೆ ಮುಂದಿನ ದಿನಗಳಲ್ಲಿ ಎಚ್ಚರದಿಂದ ಇರುವುದು ಅನಿವಾರ್ಯ ಎಂದು ತಿಳಿಸಿದೆ.
ಕೊರೋನಾ ತಡೆಯುವ ದಿಸೆಯಲ್ಲಿ ಜನ ಸಾಮೂಹಿಕವಾಗಿ ಸೇರುವುದು ನಿಲ್ಲಿಸಬೇಕು. ಸರ್ಕಾರದ ಎಲ್ಲ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಜನರು ಜಾಗೃತರಾಗಿ ಇರಬೇಕು. ಹಾಗಾದಾಗ ಮಾತ್ರ ಫೆಬ್ರವರಿ ವೇಳೆಗೆ ಸೋಂಕು ನಿಯಂತ್ರಣಕ್ಕೆ ಬರಲಿದೆ ಎಂದು ಮಾಹಿತಿ ನೀಡಿದೆ. ಜೂನ್ 1ರಂದು ಕೇಂದ್ರ ಸರ್ಕಾರವು ತಜ್ಞರ ಸಮಿತಿ ರಚಿಸಿತ್ತು.