ಅ.26-27ರಂದು ಹೊಸದಿಲ್ಲಿಯಲ್ಲಿ ಮಹತ್ವದ ಸಭೆ ಸೇನಾಪಡೆ ಸಹಕಾರ ವೃದ್ಧಿಗೆ ಭಾರತ- ಅಮೆರಿಕ ಒಪ್ಪಂದ

ಹೊಸದಿಲ್ಲಿ: ಎರಡೂ ರಾಷ್ಟ್ರಗಳ ಸೇನಾ ಪಡೆಗೆ ಲಾಭವಾಗಲಿರುವ ಮೂಲ ವಿನಿಮಯ ಹಾಗೂ ಭೌಗೋಳಿಕ ಸಹಕಾರ ಒಪ್ಪಂದಕ್ಕೆ (ಬಿಇಸಿಎ) ಅಮೆರಿಕ – ಭಾರತ ಸಹಿ ಹಾಕಲಿವೆ. ಇದರಿಂದ ಉಭಯ ರಾಷ್ಟ್ರಗಳ ಸೇನಾ ಪಡೆಗಳ ಬಾಂಧವ್ಯ ವೃದ್ಧಿಯಾಗಲಿದ್ದು, 26-27ರಂದು ಹೊಸದಿಲ್ಲಿಯಲ್ಲಿ ನಡೆಯಲಿರುವ 2+2 ಆನ್‍ಲೈನ್ ಸಭೆಯಲ್ಲಿ ಒಪ್ಪಂದದ ಬಗ್ಗೆ ಘೋಷಿಸಲಾಗುತ್ತಿದೆ.
ಈಗಾಗಲೇ ರಕ್ಷಣಾ ಪಡೆಗಳ ಸಹಕಾರ ಹೆಚ್ಚಿಸಲು ಭಾರತ – ಅಮೆರಿಕ ಎರಡು ಒಪ್ಪಂದಕ್ಕೆ ಸಹಿ ಹಾಕಿವೆ. ಒಂದು 2016ರ ಲಾಜಿಸ್‍ಟಿಕ್ಸ್ ವಿನಿಮಯ ಒಡಂಬಡಿಕೆಯಾದರೆ, ಮತ್ತೊಂದು 2018ರ ಸಂವಹನ, ಹೊಂದಾಣಿಕೆ ಹಾಗೂ ಭದ್ರತಾ ವ್ಯವಸ್ಥೆ ಒಪ್ಪಂದವಾಗಿದೆ. ಹಾಗಾಗಿ ಈ ಮೂರನೇ ಒಪ್ಪಂದವು ಪರಸ್ಪರ ಭೌಗೋಳಿಕ (ಭೂಮಿಯ ಮೇಲ್ಮೈನಲ್ಲಿರುವ ಸಾಗರ, ಪರ್ವತ ಸೇರಿ ಪ್ರತ್ಯೇಕ ಗುಣಲಕ್ಷಣ ಪತ್ತೆ ಹಚ್ಚುವ ) ಹಾಗೂ ಗುಪ್ತಚರ ಮಾಹಿತಿ ವಿನಿಮಯ ಮಾಡಿಕೊಳ್ಳಲು ನೆರವಾಗಲಿದ್ದು, ರಕ್ಷಣಾ ಕಾರ್ಯಾಚರಣೆಗೆ ಸಹಕಾರಿಯಾಗಲಿದೆ. ಉದಾಹರಣೆಗೆ, ಭೌಗೋಳಿಕ ಮಾಹಿತಿ ವಿನಿಮಯದಿಂದ ಕ್ಷಿಪಣಿಗಳು ನಿಖರವಾಗಿ ಗುರಿ ಹೊಡೆದುರುಳಿಸಲು ಸಾಧ್ಯವಾಗಲಿದೆ.
ಇನ್ನು ಒಪ್ಪಂದದ ಕುರಿತು ಎರಡು ರಾಷ್ಟ್ರಗಳ ಸಂತಸ ವ್ಯಕ್ತಪಡಿಸಿವೆ ಎಂದು ತಿಳಿದುಬಂದಿದೆ. ಅಲ್ಲದೇ ಒಪ್ಪಂದದ ಕರಡು ಪ್ರತಿಯೂ ಸಿದ್ಧವಾಗಿದ್ದು, ಕೇವಲ ಸರ್ಕಾರಗಳ ಅಂಕಿತ ಮಾತ್ರವೇ ಬಾಕಿಯಿದೆ. ಸಭೆಯಲ್ಲಿ ಬಿಇಸಿಎ ಜತೆಗೆ ಕಡಲ ಮಾಹಿತಿ ಹಂಚಿಕೆ ತಾಂತ್ರಿಕ ವ್ಯವಸ್ಥೆ (ಎಂಐಎಸ್‍ಟಿಎ) ಒಪ್ಪಂದಕ್ಕೂ ಉಭಯ ರಾಷ್ಟ್ರಗಳು ಸಹಿ ಹಾಕುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ