ಸುಪ್ರೀಂ ಮಾಜಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನು ಬಾಹ್ಯ ಶಕ್ತಿಗಳು ನಿಯಂತ್ರಿಸುತ್ತಿದ್ದವು: ಮಾಜಿ ನ್ಯಾಯಾಧೀಶ ಕುರಿಯನ್ ಜೋಸೆಫ್

ನವದೆಹಲಿ: ಪ್ರಕರಣಗಳ ಇತ್ಯರ್ಥ, ಪ್ರಕರಣಗಳ ವಿಲೇವಾರಿಗೆ ನ್ಯಾಯಪೀಠಗಳಿಗೆ ಹಂಚಿಕೆ, ಸುಪ್ರೀಂ ಹಾಗೂ ಹೈಕೋರ್ಟ್ ಗಳ ನ್ಯಾಯಾಧೀಶರ ನೇಮಕ ವಿಚಾರಗಳಲ್ಲಿ ಸುಪ್ರೀಂ ಕೋರ್ಟ್ ನ ಮಾಜಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನು ಬಾಹ್ಯ ಶಕ್ತಿಗಳು ನಿಯಂತ್ರಿಸುತ್ತಿದ್ದವು ಎಂದು ಸುಪ್ರೀಂ ಕೋರ್ಟ್ ನ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಆರೋಪಿಸಿದ್ದಾರೆ.

ಈ ಹಿಂದೆ ಜಸ್ಟೀಸ್ ಕುರಿಯನ್ ಸೇರಿದಂತೆ ಇಂದಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಹಾಗೂ ಇತರ ಇಬ್ಬರು ಹಿರಿಯ ನ್ಯಾಯಾಧೀಶರು ಸುದ್ದಿಗೋಷ್ಠಿ ನಡೆಸಿ ಅಂದಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಕಾರ್ಯವೈಖರಿಗೆ ವಿರೋಧ ವ್ಯಕ್ತಪಡಿಸಿದ್ದರು. ಇದು ದೇಶಾದ್ಯಂತ ಭಾರೀ ಸುದ್ದಿಗೆ ಗ್ರಾಸವಾಗಿತ್ತು. ಇದೀಗ ಸಂದರ್ಶನವೊಂದರಲ್ಲಿ ಮಾನಾಡಿರುವ ಕುರಿಯನ್ ಜೋಸೆಫ್, ಹಲವು ವಿಚಾರಗಳಲ್ಲಿ ಬಾಹ್ಯ ಶಕ್ತಿಗಳು ಪ್ರಭಾವ ಬೀರುವುದಲ್ಲದೆ ದೀಪಕ್ ಮಿಶ್ರಾರನ್ನು ನಿಯಂತ್ರಿಸುತ್ತಿದ್ದವು ಎಂದು ಆರೋಪಿಸಿದ್ದಾರೆ.

ಜನವರಿಯಲ್ಲಿ ಸುಪ್ರೀಂ ಕೋರ್ಟ್ ಆವರಣದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಇಂದಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾಯಮೂರ್ತಿ ಎಂ ಬಿ ಲೋಕೂರ್, ಮಾಜಿ ನ್ಯಾಯಾಧೀಶ ಜೆ ಚೆಲಮೇಶ್ವರ, ಕುರಿಯನ್ ಜೋಸೆಫ್ ಇದ್ದರು, ಅಂದು ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಗಳಲ್ಲಿ ಲೋಪದೋಷವಾಗುತ್ತಿದೆ, ಉನ್ನತ ನ್ಯಾಯಾಲಯದಲ್ಲಿ ಪ್ರಕರಣಗಳ ವಿಚಾರಣೆ ಹಂಚಿಕೆಯಲ್ಲಿ ಪಕ್ಷಪಾತ ಧೋರಣೆ ತಳೆಯಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.

ಜಸ್ಟೀಸ್ ಜೋಸೆಫ್ ಕುರಿಯನ್ ಕಳೆದ ತಿಂಗಳು 30ರಂದು ನಿವೃತ್ತಿ ಹೊಂದಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ತಮ್ಮ ಅಧಿಕೃತ ನಿವಾಸದಲ್ಲಿ ಅನೌಪಚಾರಿಕವಾಗಿ ಮಾತನಾಡಿದ್ದ ಸಂದರ್ಭದಲ್ಲಿ, ಅಂದು ಪತ್ರಿಕಾಗೋಷ್ಠಿ ನಡೆಸಿದ್ದಕ್ಕೆ ಯಾವುದೇ ವಿಷಾದಗಳಿಲ್ಲ. ನಾವು ಆಕ್ಷೇಪವೆತ್ತಿದ ನಂತರ ಸುಪ್ರೀಂ ಕೋರ್ಟ್ ನ ಕಾರ್ಯವೈಖರಿಯಲ್ಲಿ ಬದಲಾವಣೆಗಳಾಗಿದ್ದು ಹೆಚ್ಚು ಪಾರದರ್ಶಕವಾಗಿದೆ ಎಂದಿದ್ದಾರೆ.

ಯಾರೋ ಹೊರಗಿನವರು ಮುಖ್ಯ ನ್ಯಾಯಮೂರ್ತಿಗಳನ್ನು ನಿಯಂತ್ರಿಸುತ್ತಿದ್ದಾರೆ ಎಂದು ಅನಿಸಿ ನಾವು ಅವರನ್ನು ಭೇಟಿ ಮಾಡಿ ಕೇಳಿದೆವು. ಸುಪ್ರೀಂ ಕೋರ್ಟ್ ನ ಘನತೆ, ಗಾಂಭೀರ್ಯತೆ, ಸ್ವತಂತ್ರ ಕಾರ್ಯವೈಖರಿಯನ್ನು ಕಾಪಾಡಿ ಎಂದು ನಾವು ಪತ್ರ ಬರೆದಿದ್ದೆವು. ನಮ್ಮೆಲ್ಲಾ ಪ್ರಯತ್ನಗಳು ವಿಫಲವಾದಾಗ ಸುದ್ದಿಗೋಷ್ಠಿ ನಡೆಸಲು ತೀರ್ಮಾನಿಸಿದೆವು ಎಂದು ಕುರಿಯನ್ ಹೇಳಿದ್ದಾರೆ.

ಸುದ್ದಿಗೋಷ್ಠಿ ನಡೆಸುವಂತೆ ಆಲೋಚನೆ ನೀಡಿದ್ದು ನ್ಯಾಯಮೂರ್ತಿಗಳಾದ ಚೆಲಮೇಶ್ವರ, ಅದಕ್ಕೆ ಉಳಿದ ನ್ಯಾಯಾಧೀಶರು ಒಪ್ಪಿಗೆ ಸೂಚಿಸಿದರು ಎಂದ ಜಸ್ಟೀಸ್ ಕುರಿಯನ್, ವಿವಿಧ ನ್ಯಾಯಪೀಠಗಳಿಗೆ ಕೇಸುಗಳ ವಿಚಾರಣೆಯನ್ನು ವರ್ಗಾಯಿಸುವಾಗ ರಾಜಕೀಯವಾಗಿ ಪ್ರಭಾವವನ್ನು ಹೊಂದಿರುವ ನ್ಯಾಯಾಧೀಶರನ್ನು ದೀಪಕ್ ಮಿಶ್ರಾ ಅವರು ಆಯ್ಕೆ ಮಾಡಿಕೊಳ್ಳುತ್ತಿದ್ದರು ಎಂದಿದ್ದಾರೆ.

ಈ ರೀತಿ ಭಿನ್ನಾಭಿಪ್ರಾಯ ಮತ್ತು ವಿರೋಧವಿದ್ದಾಗ ಸಂಪೂರ್ಣ ನ್ಯಾಯಾಲಯ ಸಭೆ ಕರೆದು ಅಲ್ಲಿ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳದೆ ಸುದ್ದಿಗೋಷ್ಠಿ ಏಕೆ ನಡೆಸಿದಿರಿ ಎಂದು ಕೇಳಿದ್ದಕ್ಕೆ,ಯಾವ ನ್ಯಾಯಾಧೀಶರು ಕೂಡ ತಮ್ಮಷ್ಟಕ್ಕೇ ಸಂಪೂರ್ಣ ನ್ಯಾಯಾಲಯ ಸಭೆ ಕರೆಯಲು ಸಾಧ್ಯವಿಲ್ಲ. ಆ ಅಧಿಕಾರವಿರುವುದು ಮುಖ್ಯ ನ್ಯಾಯಮೂರ್ತಿಗಳಿಗೆ ಮಾತ್ರ. ನ್ಯಾಯಾಧೀಶರಿಗೂ ಸಭೆ ನಡೆಸುವ ಅಧಿಕಾರ ನೀಡುವ ಬಗ್ಗೆ ಹಲವು ಮನವಿಗಳನ್ನು ಕೂಡ ಹಿಂದೆ ಮಾಡಲಾಗಿದೆ ಎಂದರು.

Supreme Court, Justice Kurian Joseph, Dipak Mishra

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ